ಶಿವಮೊಗ್ಗ: ದೇವರು ದೊಡ್ಡವನು, ಹಿಂದೂ ಯುವಕ ಕಾಂತರಾಜನ ಪ್ರಾಣ ಉಳಿಸಿದ್ದಾನೆ. ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ಹರ್ಷನಂತೆ ಈತನೂ ಹತ್ಯೆಯಾಗಬೇಕಾಗಿತ್ತು ಎಂದು ಸಂಸದ ಬಿ.ವೈ. ರಾಘವೇಂದ್ರ ವಿಷಾದದೊಡನೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಇಂದು ಹಲ್ಲೆಗೊಳಗಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಬೂತ್ ಅಧ್ಯಕ್ಷ ಕಾಂತರಾಜ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಯುವಕ ಹರ್ಷನ ಕೊಲೆ ಪ್ರಕರಣ ಇನ್ನೂ ಜೀವಂತವಾಗಿರುವಾಗಲೇ ಸಹಜ ಸ್ಥಿತಿಯತ್ತ ಶಿವಮೊಗ್ಗ ನಗರ ಮರಳುತ್ತಿರುವಾಗಲೇ ಈ ರೀತಿಯ ಮತ್ತೊಂದು ಹಲ್ಲೆಯಾಗಿರುವುದು ಅತ್ಯಂತ ಖಂಡನೀಯ. ಕಿಡಿಗೇಡಿಗಳು ಮತ್ತೆ ಮತ್ತೆ ಈ ರೀತಿಯ ದುಷ್ಕೃತ್ಯಗಳನ್ನು ಎಸಗುತ್ತಿರುವುದು ತುಂಬಾ ಗಂಭೀರ ವಿಷಯವಾಗಿದೆ ಎಂದರು.

ಈ ಕಿಡಿಗೇಡಿಗಳಿಗೆ ಯಾವ ಕಾನೂನಿನ ಭಯವೂ ಇಲ್ಲವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದೂಗಳ ಮೇಲಿನ ಹಲ್ಲೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಕಾಂತರಾಜ್ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ತನಿಖೆಯನ್ನು ಚುರುಕುಗೊಳಿಸಲಾಗುವುದು. ಇಂತಹ ಕೃತ್ಯವೆಸಗಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಅನುಕೂಲವಾಗುವಂತೆ ಕಾನೂನಿನಲ್ಲಿ ಬದಲಾವಣೆ ಮಾಡಲು ಕೂಡ ಯೋಚಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಜ್ಯೋತಿಪ್ರಕಾಶ್, ಎಸ್. ಜ್ಞಾನೇಶ್ವರ್, ಸಂತೋಷ್ ಬಳ್ಳೆಕೆರೆ, ಎಸ್. ರಮೇಶ್, ಡಾ. ಶ್ರೀಧರ್ , ಡಾ. ಸಿದ್ದನಗೌಡ , ದಿವಾಕರ್ ಶೆಟ್ಟಿ , ರಾಜೇಶ್ ಕಾಮತ್ ಮುಂತಾದವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…