ಶಿವಮೊಗ್ಗ: ನರಗುಂದ –ನವಲಗುಂದದ 42 ನೇ ವರ್ಷದ ಹುತಾತ್ಮರ ದಿನಾಚರಣೆ ಅಂಗವಾಗಿ ಜುಲೈ 21 ರಂದು ಮಧ್ಯಾಹ್ನ 12 ಗಂಟೆಗೆ ನವಲಗುಂದದಲ್ಲಿ ರೈತರ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಹೇಳಿದರು.

ಅವರು ಇಂದು ರೈತಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನರಗುಂದ –ನವಲಗುಂದ ರೈತರ ಮೇಲೆ ಅಮಾನುಷ ದೌರ್ಜನ್ಯ ನಡೆದು 42 ವರ್ಷಗಳಾಗಿವೆ. ಇದರ ಅಂಗವಾಗಿ ರೈತರ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶದ ಮೂಲಕ ರೈತರ ಮೂರು ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಭೀಕರ ಅತಿವೃಷ್ಠಿ ಮತ್ತು ಅನಾವೃಷ್ಠಿಗೆ ಒಳಗಾದ ರೈತರಿಗೆ ಪರಿಹಾರ ನೀಡಬೇಕು. ಕೃಷಿ ಸಾಲ ಮನ್ನಾ ಮಾಡಬೇಕು. ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ನೀಡಬೇಕು. ಮಹಾದಾಯಿ ಕಳಸ ಬಂಡೂರಿ ಯೋಜನೆ ಜಾರಿ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.ರೈತರ ಕಷ್ಟ ನಷ್ಟ ಸಂಕಷ್ಟಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಸರ್ಕಾರಗಳ ವಿರುದ್ಧ ಚಳವಳಿಯ ಮುಖಾಂತರ ಒತ್ತಾಯ ಮಾಡಿದರೂ ಎಲ್ಲಾ ಸರ್ಕಾರಗಳು ರೈತರನ್ನು ನಿರ್ಲಕ್ಷ್ಯ ಮಾಡಿವೆ. ರೈತರ ಮೇಲೆ ನಿರಂತರವಾದ ಶೋಷಣೆ ನಡೆಯುತ್ತಲೇ ಇದೆ. ಬಗರ್ ಹುಕುಂ ಸಾಗುವಳಿ ರೈತರಿಗೆ ಅನ್ಯಾಯವಾಗುತ್ತಲೇ ಇದೆ. ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ.

ರೈತರಿಗೆ ಅನ್ಯಾಯ ಮಾಡುತ್ತಿರುವ ಸರ್ಕಾರಗಳ ವಿರುದ್ಧ ಮುಂದಿನ ಹೋರಾಟದ ತೀರ್ಮಾನಗಳನ್ನು ಈ ಸಮಾವೇಶದಲ್ಲಿ ತೆಗೆದುಕೊಳ್ಳಲಾಗುವುದು ಎಂದರು.ಇಲ್ಲಿವರೆಗೆ ಸುಮಾರು 153 ರೈತರನ್ನು ಪೊಲೀಸರು ಗುಂಡಿಟ್ಟು ಸಾಯಿಸಿದ್ದಾರೆ. ದೇಶದಲ್ಲಿ ಇತ್ತೀಚೆಗೆ ಗುಂಡು ಹಾರಿಸದೇ 10 ಲಕ್ಷ ರೈತರನ್ನು ಕೊಲ್ಲಲಾಗಿದೆ. ಕರ್ನಾಟಕದಲ್ಲಿ 40 ಸಾವಿರಕ್ಕೂ ಹೆಚ್ಚು ರೈತರನ್ನು ಕೊಲ್ಲಲಾಗಿದೆ. ಇದಕ್ಕೆ ಆತ್ಮಹತ್ಯೆ ಎಂದು ಹೆಸರುಕೊಟ್ಟು ಒಂದು ರೀತಿಯಲ್ಲಿ ಪ್ರಾಯೋಜಿತ ಕೊಲೆಗಡುಕತನದ ಕೆಸಲವನ್ನು ಸರ್ಕಾರಗಳು ಇಂದಿಗೂ ಮುಂದುವರೆಸುತ್ತಿವೆ ಎಂದು ಆರೋಪಿಸಿದರು.

ಭೂಸುಧಾರಣಾ ಕಾಯ್ದೆ ರೈತರಿಗೆ ವಿರೋಧಿಯಾಗಿದೆ. ಎಪಿಎಂಸಿ ಕಾಯ್ದೆಯಿಂದ ಎಪಿಎಂಸಿಗಳೇ ಮುಚ್ಚಿ ಹೋಗುತ್ತಿವೆ. ಕೇಂದ್ರ ಸರ್ಕಾರ ಘೋಷಣೆ ಮಾಡುತ್ತಿರುವ ಎಂ.ಎಸ್.ಪಿ. ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಇದ್ದು, ರೈತರಿಗೆ ಅಪಮಾನ ಮಾಡುವ ರೀತಿಯಲ್ಲಿದೆ. ಇದರಿಂದಾಗಿ ರೈತರು ಆರ್ಥಿಕ ದಿವಾಳಿಯತ್ತ ಸಾಗುತ್ತಿದ್ದಾರೆ. ಆದ್ದರಿಂದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಅವರು ಒತ್ತಾಯಿಸಿದರು.ಕಬ್ಬಿನ ಬೆಲೆ ಕನಿಷ್ಠ 1 ಟನ್ ಗೆ 4500 ರೂ. ದರ ನಿಗದಿ ಮಾಡಬೇಕು. ಬಾಕಿ ಹಣ ಪಾವತಿಸಬೇಕು. ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು. ಹಾಲಿನ ದರ ಹೆಚ್ಚಳ ಮಾಡಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ಯಾವುದೇ ಕಾರಣಕ್ಕೂ ವಿದ್ಯುತ್ ಚ್ಛಕ್ತಿ ಮತ್ತು ಬ್ಯಾಂಕ್ ಗಳನ್ನು ಖಾಸಗೀಕರಣ ಮಾಡಬಾರದು. ಕಳೆದ ವರ್ಷ ಸುರಿದ ಭಾರಿ ಮಳೆಗೆ ಹಲವು ಮನೆಗಳು ಹಾನಿಯಾಗಿದ್ದು, ಮನೆ ನಿರ್ಮಿಸಲು 5 ಲಕ್ಷ ರೂ. ಪರಿಹಾರ ನೀಡಲಾಗಿತ್ತು. ಆದರೆ, ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಈ ಎಲ್ಲಾ ವಿಷಯಗಳನ್ನಿಟ್ಟುಕೊಂಡು ಮುಂದಿನ ಹೋರಾಟದ ಬಗ್ಗೆ ಗಂಭೀರವಾಗಿ ಚರ್ಚಿಸಲು ಮತ್ತು ತೀರ್ಮಾನ ಕೈಗೊಳ್ಳಲು ನವಲಗುಂದದಲ್ಲಿ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶಕ್ಕೆ ಜಿಲ್ಲೆಯಿಂದಲೂ ನೂರಾರು ಸಂಖ್ಯೆಯಲ್ಲಿ ರೈತರು ಭಾಗವಹಿಸಲಿದ್ದಾರೆ. ರೈತರು, ಮಹಿಳೆಯರು, ಕೃಷಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವಂತೆ ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಹಿಟ್ಟೂರು ರಾಜು, ಟಿ.ಎಂ. ಚಂದ್ರಪ್ಪ, ಈಶಣ್ಣ ಅರಬಿಳಚಿ, ಕೆ. ರಾಘವೇಂದ್ರ, ಡಿ.ಹೆಚ್. ರಾಮಚಂದ್ರಪ್ಪ, ಇ.ಬಿ. ಜಗದೀಶ್, ಎಸ್. ಶಿವಮೂರ್ತಿ, ರುದ್ರೇಶ್, ಪಂಚಾಕ್ಷರಿ, ಸಿ. ಚಂದ್ರಪ್ಪ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…