ಶಿವಮೊಗ್ಗ: ಕಳೆದ 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜುಲೈನಲ್ಲೇ ಭದ್ರಾ ಜಲಾಶಯ ಭರ್ತಿಯಾಗಿದ್ದು, 4 ಕ್ರಸ್ಟ್ ಗೇಟ್ ಗಳ ಮೂಲಕ ನದಿಗೆ ನೀರು ಬಿಡಲಾಗಿದೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಅತಿ ಹೆಚ್ಚಿನ ಮಳೆಯಾಗಿದ್ದು, ಇದರ ಪರಿಣಾಮ ಭದ್ರಾ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ.

ಸುಮಾರು 40 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇಂದು ಬೆಳಗ್ಗೆ 4 ಗೇಟ್ ಗಳನ್ನು ತೆರೆದು 15 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ. 4 ಗೇಟ್ ಗಳನ್ನು ಕೂಡ ಒಂದು ಅಡಿಯಷ್ಟು ತೆರೆಯಲಾಗಿದ್ದು, ನೀರಿನ ಒಳಹರಿವು ಹೆಚ್ಚಾದಲ್ಲಿ ಗೇಟ್ ಗಳನ್ನು ಎತ್ತರಿಸಲಾಗುವುದು. ಜಲಾಶಯಕ್ಕೆ ಭೇಟಿ ನೀಡಿ ಬಾಗಿನ ಅರ್ಪಿಸಿ ಮಾತನಾಡಿದ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ದೇವರ ದಯೆಯಿಂದ ಇಷ್ಟು ಬೇಗನೇ ಅಣೆಕಟ್ಟು ತುಂಬಿರುವುದು ಸಂತೋಷದ ವಿಷಯವಾಗಿದೆ. ರೈತರಿಗೆ ಸಂಭ್ರಮ ತಂದಿದೆ. ಈಗಾಗಲೇ ಕಾಲುವೆಗಳ ಮೂಲಕ ನೀರು ಹರಿಸಲಾಗುವುದು. ನದಿಗೂ ನೀರು ಬಿಡಲಾಗಿದೆ. ನದಿ ಪಾತ್ರದ ಜನ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದರು.

ಅಧೀಕ್ಷಕ ಇಂಜಿನಿಯರ್ ಜಿ.ಎಸ್. ಪಾಟೀಲ್ ಮಾತನಾಡಿ, ಭದ್ರಾ ಜಲಾಶಯದ ಗರಿಷ್ಠ ಮಟ್ಟ 186 ಅಡಿ ಇದ್ದು, ಇಂದು 183.8 ಅಡಿಯಷ್ಟು ನೀರಿದೆ. ಸುಮಾರು 40 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 4 ಕ್ರಸ್ಟ್ ಗೇಟ್ ಗಳ ಮೂಲಕ 15 ಸಾವಿರ ಕ್ಯೂಸೆಕ್ ಗೂ ಅಧಿಕ ಪ್ರಮಾಣದ ನೀರನ್ನು ನದಿಗೆ ಬಿಡಲಾಗಿದೆ. ಒಂದು ಅಡಿಯಷ್ಟು ಗೇಟ್ ಗಳನ್ನು ತೆರೆದಿದ್ದು, ನೀರಿನ ಒಳಗರಿವು ನೋಡಿಕೊಂಡು ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುವುದು. ಎಡದಂಡೆ ನಾಲೆಗೆ 150 ಕ್ಯೂಸೆಕ್, ಬಲದಂಡೆ ನಾಲೆ 1 ಸಾವಿರ ಕ್ಯೂಸೆಕ್ ನಷ್ಟು ನೀರನ್ನು ಜುಲೈ 13 ರಿಂದ ಬಿಡಲಾಗುವುದು ಎಂದರು.ಈ ಸಂದರ್ಭದಲ್ಲಿ ಅಧಿಕಾರಿಗಳಾದ ಜಗದೀಶ್ ಬಿ.ಆರ್., ಪ್ರಸನ್ನ ಇದ್ದರು.

ವರದಿ ಮಂಜುನಾಥ್ ಶೆಟ್ಟಿ…