ಶಿವಮೊಗ್ಗ: ಅಪೂರ್ಣಗೊಂಡಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ ಪೂರ್ಣಗೊಳಿಸುವ ಹಾಗೂ ಶಿವಮೊಗ್ಗ ನಗರದ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವ ಸಲುವಾಗಿ ಕೂಡಲೇ ವಿಶೇಷ ಸಭೆ ಕರೆಯಬೇಕೆಂದು ಆಗ್ರಹಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ವಿರೋಧ ಪಕ್ಷದ ಸದಸ್ಯರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ, ಸರ್ವರಿಗೆ ಸೂರು ಯೋಜನೆಯಡಿಯಲ್ಲಿ ಸ್ಲಂ ಬೋರ್ಡ್ ನಿಂದ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಅಶೋಕನಗರ ಕೆರೆ ಅಂಗಳ, ಚಿಕ್ಕಮಟ್ಟಿ ಎರಡನೇ ಹಂತ, ಗೋಪಾಳ ಸರ್ವೇ ನಂ 10, ಹನುಮಂತ ನಗರ, ಕುಂಬಾರ ಗುಂಡಿ, ಟಿಪ್ಪುನಗರ ಕರೆ ಅಂಗಳ, ಜೆ.ಪಿ. ನಗರ, ಮತ್ತು ಶಾಂತಿನಗರ ಕೊಳಚೆ ಪ್ರದೇಶಗಳಲ್ಲಿ 1590 ಕೊಳಚೆ ನಿವಾಸಿಗಳಿಗೆ ಮನೆ ಕಟ್ಟಿ ನಿರ್ಮಿಸಿಕೊಡುವ ಯೋಜನೆಯನ್ನು 2018 -19 ನೇ ಸಾಲಿನಲ್ಲಿ ಕೈಗೊಳ್ಳಲಾಗಿತ್ತು ಎಂದರು.ಬಡ ಕೊಳಗೇರಿ ನಿವಾಸಿಗಳಿಂದ ಫಲಾನುಭವಿ ವಂತಿಕೆ ಹಣ ಕಟ್ಟಿಸಿಕೊಂಡು 6 ತಿಂಗಳ ಒಳಗೆ ಮನೆ ನಿರ್ಮಾಣದ ಭರವಸೆ ನೀಡಲಾಗಿತ್ತು. ಮೂರು ವರ್ಷವಾದರೂ ಕೇವಲ 346 ಮನೆ ಮಾತ್ರ ನಿರ್ಮಿಸಿ ಉಳಿದವರಿಗೆ ಈವರೆಗೂ ಮನೆ ಪೂರ್ಣಗೊಳಿಸದೇ ಬಡ ಕೊಳಗೇರಿ ನಿವಾಸಿಗಳು ಬೀದಿ ಪಾಲಾಗಿದ್ದಾರೆ ಎಂದು ದೂರಿದರು.
ಮನೆ ಇಲ್ಲದೇ, ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಾ ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ನಿಗದಿತ ಕಾಲಾವಧಿ ಮುಗಿದಿದ್ದು, ಇನ್ನೂ 1244 ಮನೆಗಳು ಅಪೂರ್ಣವಾಗಿದೆ. ಕೂಡಲೇ ನಿರ್ಮಾಣ ಕಾಮಗಾರಿ ಹೊಣೆ ಹೊತ್ತಿರುವ ಏಜೆನ್ಸಿ ಹಾಗೂ ಸ್ಲಂ ಬೋರ್ಡ್ ಅಧಿಕಾರಿಗಳ ಸಭೆ ಕರೆದು ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ವಿನಂತಿಸಿದ್ದಾರೆ.ಈಗಾಗಲೇ ಸರ್ಕಾರಿ ಒಡೆತನದ ಕಂದಾಯ ಭೂಮಿಯಲ್ಲಿ ಕೊಳಚೆ ಪ್ರದೇಶವೆಂದು ಘೋಷಿಸಲಾಗಿರುವ ನಗರದ ಅಂಬೇಡ್ಕರ್ ನಗರ, ಅಶೋಕನಗರ ಚಾನಲ್ ಏರಿಯಾ ಸೇರಿದಂತೆ ವಿವಿಧ ಬಡಾವಣೆಗಳ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ಹಂಚುವ ಸಲುವಾಗಿ ಕಂದಾಯ ದಾಖಲೆಗಳಲ್ಲಿ ಹಕ್ಕು ವರ್ಗಾವಣೆ ಅವಶ್ಯಕವಾಗಿರುವ ಕಾರಣ ಕೂಡಲೇ ಕೊಳಗೇರಿ ಪ್ರದೇಶಗಳ ಭೂ ಹಕ್ಕು ವರ್ಗಾವಣೆಯನ್ನು ಕಂದಾಯ ದಾಖಲೆಯಲ್ಲಿ ದಾಖಲಿಸಿಕೊಡಬೇಕಾಗಿ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ಹೆಚ್.ಸಿ. ಯೋಗೀಶ್, ಬಿ.ಎ. ರಮೇಶ್ ಹೆಗ್ಡೆ, ಮೆಹಖ್ ಷರೀಫ್, ರೇಖಾ ರಂಗನಾಥ್ ಮೊದಲಾವರಿದ್ದರು.