ಶಿವಮೊಗ್ಗ: ವೈದ್ಯ ತಾನು ಕಲಿತ ವಿದ್ಯೆಯಿಂದ ರೋಗ ಗುಣಪಡಿಸುವ ಸಂಪೂರ್ಣ ಪ್ರಯತ್ನ ಮಾಡುತ್ತಾನೆ. ಯಾವುದಾದರೂ ಸಂದರ್ಭದಲ್ಲಿ ರೋಗಿಗೆ ಏನಾದರೂ ಸಮಸ್ಯೆಯಾದಲ್ಲಿ ವೈದ್ಯರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಐಎಂಎ ಸಂಸ್ಥೆ ಮಾಜಿ ಅಧ್ಯಕ್ಷ ಡಾ. ಪರಮೇಶ್ವರ ಶಿಗ್ಗಾವ್ ಹೇಳಿದರು.
ರಾಜೇಂದ್ರನಗರದ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ವೈದ್ಯರ ದಿನ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಿಸ್ವಾರ್ಥ ಸೇವೆಯ ವೈದ್ಯ ವೃತ್ತಿಯನ್ನು ಎಲ್ಲರೂ ಗೌರವಿಸಬೇಕು ಎಂದು ತಿಳಿಸಿದರು.
ಡಾ. ಅರುಣ್ ಮಾತನಾಡಿ, ವೈದ್ಯರನ್ನು ದೇವರು ಎಂದು ಕರೆಯದಿದ್ದರೂ ಪರವಾಗಿಲ್ಲ. ಹಲ್ಲೆ ಮಾಡುವ ಮಟ್ಟಕ್ಕೆ ಯಾರೂ ಹೋಗಬಾರದು. ವೈದ್ಯಕೀಯ ಲೋಕ ಬಹಳ ವಿಸ್ತಾರವಾಗಿದ್ದು, ರೋಗ ಗುಣಪಡಿಸುವ ಎಲ್ಲ ಪ್ರಯತ್ನ ಯಶಸ್ವಿಯಾಗುತ್ತಿವೆ. ರೋಗಿ ಗುಣಮುಖನಾದರೆ ವೈದ್ಯರಿಗೆ ತುಂಬಾ ಸಂತೋಷವಾಗುತ್ತದೆ ಎಂದರು.
ಡಾ. ರವಿಕಿರಣ್ ಮಾತನಾಡಿ, ವೈದ್ಯಕೀಯ ಕ್ಷೇತ್ರ ಬಿಡುವಿಲ್ಲದ ಹಾಗೂ ವೈಯುಕ್ತಿಕ ಬದುಕು ಇಲ್ಲದೇ ನಿಸ್ವಾರ್ಥ ಸೇವೆ ಸಲ್ಲಿಸುವ ಕ್ಷೇತ್ರವಾಗಿದ್ದು, ಯಾವುದೇ ಸಮಯದಲ್ಲಿ ಆದರೂ ವೈದ್ಯರು ಸ್ಪಂದಿಸುತ್ತಾರೆ. ವೈದ್ಯರನ್ನು ಗೌರವಿಸಬೇಕು ಎಂದು ಹೇಳಿದರು.ಡಾ. ಅಕ್ಷಯ್ ಹಾಗೂ ಡಾ. ಗೀತಾ ಲಕ್ಷ್ಮಿ ಮಾತನಾಡಿದರು.
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ ಮಾತನಾಡಿ, ರೋಟರಿ ಸಂಸ್ಥೆ ವತಿಯಿಂದ ಸಮಾಜದಲ್ಲಿ ತಮ್ಮ ವೃತ್ತಿಯಲ್ಲಿ ಸಾರ್ಥಕ ಸೇವೆ ಮಾಡಿದ ಗಣ್ಯರನ್ನು ಸನ್ಮಾನಿಸುತ್ತ ಬಂದಿದ್ದೇವೆ. ಇಂದು ವೈದ್ಯರ ದಿನಾಚರಣೆ ಪ್ರಯುಕ್ತ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದೆ. ವೈದ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೈದ್ಯರನ್ನು ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಕಾರ್ಯದರ್ಶಿ ಕುಮಾರಸ್ವಾಮಿ, ಮಾಜಿ ಸಹಾಯಕ ಗವರ್ನರ್ ಚಂದ್ರಹಾಸ್ ಪಿ.ರಾಯ್ಕರ್, ವಸಂತ್ ಹೋಬಳಿದಾರ್, ಜಿ.ವಿಜಯ್‌ಕುಮಾರ್, ಡಾ. ಕಡಿದಾಳ್ ಗೋಪಾಲ್, ಮಾಜಿ ಅಧ್ಯಕ್ಷರಾದ ಎನ್.ಎಚ್.ಶ್ರೀಕಾಂತ್, ಗಣೇಶ್, ಮಂಜುನಾಥ ಕದಂ, ಮಹೇಶ್, ಸತೀಶ್‌ಚಂದ್ರ, ಕಿಶೋರ್, ಅರುಣ್ ದೀಕ್ಷಿತ್, ವೀರಣ್ಣ, ಮುಕುಂದ್, ಧರಣೇಂದ್ರ ದಿನಕರ್, ಸಂತೋಷ್, ಆನಂದ್, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಮಧುರಾ ಮಹೇಶ್, ಜಯಂತಿ ವಾಲಿ, ಬಿಂದು ವಿಜಯ್‌ಕುಮಾರ್, ಜಿಲ್ಲಾ ಮಾಜಿ ಗವರ್ನರ್ ಎಚ್.ಎಲ್.ರವಿ ಉಪಸ್ಥಿತರಿದ್ದರು.