ಶಿವಮೊಗ್ಗ : ಧನ ಲಾಭಕ್ಕಿಂತ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಾಗ ಮಾತ್ರ ಸಮಾಜ ಸಧೃಡವಾಗಿ ಮುಂದುವರಿಯಲು ಸಾಧ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಅಭಿಪ್ರಾಯಪಟ್ಟರು.

ಮಂಗಳವಾರ ನಗರದ ರಾಷ್ಟ್ರೀಯ ಶಿಕ್ಷಣ ‌ಮಹಾವಿದ್ಯಾಲಯದ ವತಿಯಿಂದ ಐಸಿಎಸ್ಸಿ ಶಿಕ್ಷಕರಿಗಾಗಿ ಏರ್ಪಡಿಸಿದ್ದ ನಾವಿನ್ಯಯುತ ಶಿಕ್ಷಣಶಾಸ್ತ್ರಗಳ ಕುರಿತಾಗಿ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಆಧುನಿಕತೆಯ ಗುಂಗಿಗೆ ಸಿಲುಕಿ ವಿದ್ಯಾರ್ಥಿಗಳಲ್ಲಿ ಕಲಿಕಾ ಗುಣಮಟ್ಟ ಕ್ಷೀಣಿಸುತ್ತಿದೆ. ಹಾಗಾಗಿಯೇ ಭವಿಷ್ಯದ ಬಗ್ಗೆ ಭಯ ಹುಟ್ಟಿಸುವ ಜನರಿಗಿಂತ ಭರವಸೆ ಮೂಡಿಸುವ ವ್ಯಕ್ತಿಗಳ ಅವಶ್ಯಕತೆಯಿದೆ. ಅಂತಹ ಭರವಸೆ ಮೂಡಿಸುವ ಶಕ್ತಿಯಿರುವುದು ಶಿಕ್ಷಕರಿಗೆ ಮಾತ್ರ.
ಜ್ಞಾನಾರ್ಜನೆ ಸದಾ ಸಾಣೆ ಹಿಡಿದ ಕತ್ತಿಯಂತೆ ಹರಿತವಾಗುತ್ತಿರಬೇಕು. ಬದುಕಿನಲ್ಲಿ ಓದುವ, ಹೊಸತನದ ಕುರಿತಾಗಿ ಚಿಂತಿಸುವ ಹಂಬಲ ನಮ್ಮಲ್ಲಿರಬೇಕು. ಸಮುದ್ರದಲ್ಲಿ ಬಿದ್ದ ಹನಿ ನೀರು ಸಮೂಹವಾಗಿಬಿಡುತ್ತದೆ. ಅದೇ ಎಲೆಯ ಮೇಲೆ ಬಿದ್ದ ಹನಿ ನೀರು ವಜ್ರದಂತೆ ಹೊಳೆಯುತ್ತದೆ. ಎಲ್ಲಿ ಹೊಳೆಯುವ ಅವಕಾಶವಿರುತ್ತದೆ ಅಂತಹ ಜಾಗದಲ್ಲಿ ವಜ್ರದಂತೆ ಹೊಳೆಯಬೇಕು. ಅಂತಹ ಸಾಧನೆ ಸಾಧ್ಯವಾಗುವುದು ನಿರಂತರ ಕಲಿಕೆಯಿಂದ. ಅನುಮಾನ ತಪ್ಪಾಗಬಹುದು ಅದರೇ ಬದುಕಿನ ಅನುಭವ ಎಂದೆಂದಿಗೂ ತಪ್ಪಾಗಲಾರದು ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕುಲಸಚಿವರಾದ ಪ್ರೊ. ಟಿ.ಎಸ್.ಹೂವಯ್ಯಗೌಡ ಮಾತನಾಡಿ ದಿನ ಪತ್ರಿಕೆಗಳ ಅಧ್ಯಯನ ಜ್ಞಾನಾರ್ಜನೆಯ ಅವಶ್ಯಕ ಸಾಧನವಾಗಿದೆ. ಆಧುನಿಕ ಭರಾಟೆಯೊಳಗೆ ಕಳೆದು ಹೋಗದೆ ಹೊಸತನದ ಚಿಂತನೆಗಳೊಂದಿಗೆ ಸದಾ ಕ್ರಿಯಾಶೀಲರಾಗಿರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ.ಎನ್.ಕೆ.ಚಿದಾನಂದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೋಣಂದೂರು ರಾಷ್ಟ್ರೀಯ ವಸತಿ ಶಾಲೆ ಪ್ರಾಂಶುಪಾಲರಾದ ಕೆ.ಎಸ್.ವಾಸುದೇವ, ಸಹ ಪ್ರಾಧ್ಯಾಪಕರಾದ ಡಾ.ಮಂಜು‌.ಎನ್.ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…