ಶಿವಮೊಗ್ಗ: ಕೇಂದ್ರ ಬಿಜೆಪಿ ಸರ್ಕಾರ ನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಹಾಗೂ ಅವೈಜ್ಞಾನಿಕವಾಗಿ ಹೆಚ್ಚಳ ಮಾಡಿರುವ ಅಗತ್ಯ ವಸ್ತುಗಳ ಮೇಲಿನ ತೆರಿಗೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಇಂದು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಆಮ್ ಆದ್ಮಿ ಪಾರ್ಟಿ ಜಿಲ್ಲಾ ಘಟಕ ಒತ್ತಾಯಿಸಿದೆ.

ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಜನಸಾಮಾನ್ಯರಿಗೆ ನೂರೆಂಟು ಭರವಸೆಗಳನ್ನು ನೀಡಿತ್ತು. ಈ ಭರವಸೆಗಳ ಪೈಕಿ ಅತಿ ಮುಖ್ಯವಾಗಿದ್ದು ಏನೆಂದರೆ ಜನರ ಬದುಕಿಗೆ ಹೊರೆಯಾಗಿದ್ದ ಬೆಲೆ ಏರಿಕೆಯನ್ನು ಕಡಿಮೆ ಮಾಡುವುದು ನಮ್ಮ ಬಿಜೆಪಿ ಸರ್ಕಾರದ ಪ್ರಥಮ ಆದ್ಯತೆಯಾಗಿರುತ್ತದೆ ಎಂದು ಜನರಿಗೆ ಭರವಸೆ ನೀಡಿತ್ತು. ಆದರೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಹಿಂದಿನ ಎಲ್ಲ ಸರ್ಕಾರಗಳಿಗಿಂತ ಹೊರೆ ಹೆಚ್ಚಿಸಿ ಜನರ ಬದುಕಿನ ಮೇಲೆ ತೀರಾ ಪರಿಣಾಮ ಬೀರುವಂತಾಗಿದೆ. ಜನರ ಜೀವನಕ್ಕೆ ಅಗತ್ಯವಾಗಿರುವ ಅಕ್ಕಿ ಬೇಳೆ, ಮೊಸರು, ಮಜ್ಜಿಗೆ, ಆಸ್ಪತ್ರೆ ಬೆಡ್, ಔಷಧಗಳು ಹೀಗೆ ಪ್ರತಿಯೊಂದು ಅತಿ ಅವಶ್ಯಕವಾಗಿರುವ ವಸ್ತುಗಳ ಮೇಲೆ ಅವೈಜ್ಞಾನಿಕವಾಗಿ ತೆರಿಗೆ ಹೆಚ್ಚಳ ಮಾಡಿದ್ದು, ಸಾಮಾನ್ಯ ಜನರ ಬದುಕಿನ ಮೇಲೆ ಇದು ತೀರಾ ಹೊರೆಯಾಗಿದೆ ಎಂದು ಮನವಿಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಕೂಡಲೇ ಕೇಂದ್ರದ ಬಿಜೆಪಿ ಸರ್ಕಾರ ಅವೈಜ್ಞಾನಿಕವಾಗಿ ಹೆಚ್ಚಳ ಮಾಡಿರುವ ಅಗತ್ಯ ವಸ್ತುಗಳ ಮೇಲಿನ ತೆರಿಗೆಯನ್ನು ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲಾ ಅಮ್ ಆದ್ಮಿ ಪಕ್ಷದ ವತಿಯಿಂದ ಬೀದಿಗಿಳಿದು ಹೋರಾಟ ನಡೆಸಲಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ. ಮನವಿ ಸಲ್ಲಿಸುವ ಸಂದರ್ಭದಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಏಳುಮಲೈ(ಕೇಬಲ್ ಬಾಬು), ಶಿವಮೊಗ್ಗ ಜಿಲ್ಲಾಧ್ಯಕ್ಷ ಕೆ.ಕಿರಣ ಮತ್ತು ಡಿ.ಆರ್.ಲಕ್ಷ್ಮೀಶ, ಎಸ್.ಮುರುಗನ್, ಡಾ.ಸುರೇಶ್ ಬಾಬು, ಎಸ್.ರಾಮು ಇನ್ನಿತರರು ಹಾಜರಿದ್ದರು.

ವರದಿ ಮಂಜುನಾಥ್ ಶೆಟ್ಟಿ…