ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ದೋಷಮುಕ್ತರಾಗಿ ಹೊರ ಬರುತ್ತೇನೆ ಎಂಬ ಖಚಿತ ವಿಶ್ವಾಸ ನನಗಿತ್ತು. ನಾನು ತಪ್ಪು ಮಾಡಿಲ್ಲ. ನಮ್ಮ ಮನೆ ದೇವತೆ ಚೌಡೇಶ್ವರಿ ನನ್ನನ್ನು ಆರೋಪಮುಕ್ತನನ್ನಾಗಿ ಮಾಡುತ್ತಾಳೆ ಎಂದು ಹಿಂದೆಯೇ ಹೇಳಿದ್ದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬಿಜೆಪಿ ನಗರ ಘಟಕದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರಿಗೆ ಭಜನೆ, ಪೂಜೆ ನೆರವೇರಿಸಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಆರೋಪ ಮುಕ್ತನಾಗಿರುವುದು ಸತ್ಯಕ್ಕೆ ಸಂದ ಜಯವಾಗಿದೆ. ನನ್ನಿಂದ ಪಕ್ಷಕ್ಕೆ ಮತ್ತು ಹಿರಿಯರಿಗೆ ಹಾಗೂ ಕಾರ್ಯಕರ್ತರಿಗೆ ಮುಜುಗರವಾಯ್ತಲ್ಲ ಎಂಬ ನೋವಿತ್ತು. ಅನ್ಯಾಯವಾಗಿ ಒಂದು ಜೀವ ಹೋಯ್ತಲ್ಲ. ಆತನ ಕುಟುಂಬ ಅನಾಥವಾಗಿದ್ದು ಕೂಡ ನನಗೆ ನೋವು ಕಾಡುತ್ತಿತ್ತು. ನನ್ನ ಪಾತ್ರವಿಲ್ಲದೇ ಆರೋಪ ಬಂತಲ್ಲ ಎಂಬ ದುಃಖವಿತ್ತು. ಆದರೆ, ಅಭಿಮಾನಿಗಳು ಮತ್ತು ಸಾಧು ಸಂತರು ಧೈರ್ಯ ತುಂಬಿದ್ದರು. ದೋಷಮುಕ್ತರಾಗಿ ಹೊರ ಬರುತ್ತೀರಾ ಎಂದು ಎಲ್ಲರೂ ಆಶಯ ವ್ಯಕ್ತಪಡಿಸಿದ್ದರು. ತಾಯಿ ಚೌಡೇಶ್ವರಿ ದೇವಿ ಕೃಪೆಯಿಂದ ದೋಷಮುಕ್ತನಾಗಿ ಹೊರಬಂದಿರುವೆ ಎಂದರು.

ಆ ಸಂದರ್ಭದಲ್ಲಿ ಪ್ರತಿಭಟನೆ ಮಾಡಿದ್ದ ಕಾಂಗ್ರೆಸ್ ನವರು ಕೂಡ ನನಗೆ ದೂರವಾಣಿ ಮೂಲಕ ಅಣ್ಣಾ ನಿಮ್ಮ ತಪ್ಪಿಲ್ಲ ಎಂದು ಗೊತ್ತಿದೆ. ಪಕ್ಷದ ಅಣತಿ ಮೇರೆಗೆ ಪ್ರತಿಭಟನೆ ಮಾಡಿದ್ದೇವೆ. ದೋಷಮುಕ್ತರಾಗಿ ಹೊರಬರುತ್ತೀರಾ ಎಂದು ಹೇಳಿದ್ದರು. ಇವತ್ತು ಕೆಲವು ಕಾಂಗ್ರೆಸ್ ಮಿತ್ರರು ಅಭಿನಂದನೆ ಕೂಡ ಹೇಳಿದ್ದಾರೆ. ಬೆಳಗ್ಗೆಯಿಂದ ಸಾವಿರಾರು ಅಭಿಮಾನಿಗಳು, ಸಾಧು ಸಂತರು ದೂರವಾಣಿ ಮೂಲಕ ಸಂತೋಷ ವ್ಯಕ್ತಪಡಿಸಿದ್ದಾರೆ. ಎಲ್ಲರಿಗೂ ನಾನು ಆಭಾರಿಯಾಗಿರುತ್ತೇನೆ ಎಂದರು.ಪಕ್ಷದ ಹಿರಿಯ ಮುಖಂಡ ಭಾನುಪ್ರಕಾಶ್ ಮಾತನಾಡಿ, ಗಾಂಧಿ ಕೊಂದ ಪಕ್ಷವೆಂದೇ ಬಿಜೆಪಿಯನ್ನು ಕಾಂಗ್ರೆಸ್ ಬಿಂಬಿಸಿಕೊಂಡು ಬಂದಿದೆ. ಸ್ವತಃ ಗಾಂಧಿಜಿ ಮತ್ತೊಮ್ಮೆ ಹುಟ್ಟಿಬಂದು ನನ್ನನ್ನು ಕೊಂದವರು ಬಿಜೆಪಿಯವರಲ್ಲ ಎಂದು ಹೇಳಿದರೂ ಸಹ ಕಾಂಗ್ರೆಸ್ ಒಪ್ಪುವ ಸ್ಥಿತಿಯಲ್ಲಿಲ್ಲ. ಆರೋಪ ಮಾಡುವುದನ್ನೂ ಬಿಡುವುದೂ ಇಲ್ಲ. ಇಂದು ಕಾಂಗ್ರೆಸ್ ಚಾಳಿ ಎಂದರು.ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಈಶ್ವರಪ್ಪನವರ ಮೇಲೆ ಆರೋಪ ಬರುತ್ತಿದ್ದಂತೆ ಬೇರೆ ಬೇರೆ ರೀತಿಯ ವಿಶ್ಲೇಷಣೆ ನಡೆಯಿತು. ಕಾನೂನು ದುರುಪಯೋಗ ಮಾಡಿಕೊಳ್ಳುವ ಅವಕಾಶವಿದೆ ಎಂದಿದ್ದರು. ಆದರೂ, ಈಶ್ವರಪ್ಪ ಅವರು ಪರಿಸ್ಥಿತಿ ಸಮರ್ಥವಾಗಿ ಎದುರಿಸಿದರು ಎಂದು ಹೇಳಿದರು.

ವೇದಿಕೆ ಕಾರ್ಯಕ್ರಮದ ನಂತರ ಬಿಜೆಪಿ ಮಹಿಳಾ ಮೋರ್ಚಾ ಮತ್ತು ಯುವ ಮೋರ್ಚಾ ವತಿಯಿಂದ ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ರಾಮಣ್ಣ ಶ್ರೇಷ್ಠಿ ಪಾರ್ಕ್, ಗೋಪಿ ವೃತ್ತ, ಬಾಲರಾಜ್ ಅರಸ್ ರಸ್ತೆ ಮೂಲಕ ಈಶ್ವರಪ್ಪನವರ ಮನೆಯವರೆಗೆ ದ್ವಿಚಕ್ರವಾಹನ ರ್ಯಾಲಿ ನಡೆಸಲಾಯಿತು, ಈ ಸಂದರ್ಭದಲ್ಲಿ ಶಾಸಕ ಡಿ.ಎಸ್. ಅರುಣ್, ಮೇಯರ್ ಸುನಿತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಬಿಜೆಪಿ ನಗರಾಧ್ಯಕ್ಷ ಜಗದೀಶ್, ಜ್ಯೋತಿ ಪ್ರಕಾಶ್, ಎಸ್. ದತ್ತಾತ್ರಿ, ಸೂಡಾ ಅಧ್ಯಕ್ಷ ನಾಗರಾಜ್, ಕೆ.ಇ. ಕಾಂತೇಶ್, ಜ್ಞಾನೇಶ್ವರ್, ಚನ್ನಬಸಪ್ಪ, ಪ್ರಭು, ಸುರೇಖಾ ಮುರಳೀಧರ್, ಸುವರ್ಣಾ ಶಂಕರ್, ಆರತಿ ಆ.ಮ. ಪ್ರಕಾಶ್, ಅನಿತಾ ರವಿಶಂಕರ್, ಬಳ್ಳೆಕೆರೆ ಸಂತೋಷ್, ಇ. ವಿಶ್ವಾಸ್ ಮೊದಲಾವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…