ಎಚ್ಎಸ್ ರುದ್ರಪ್ಪ ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ELC ಮತ್ತು CJC ಕ್ಲಬ್ ಗಳನ್ನು ಜಿಲ್ಲೆಯ ಪ್ರಖ್ಯಾತ ವಕೀಲರಾದ ಶ್ರೀಯುತ ಜಿ ಆರ್ ರಾಘವೇಂದ್ರ ಸ್ವಾಮಿ ರವರು ಉದ್ಘಾಟಿಸಿದರು.

ಶ್ರೀಯುತರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಸಂವಿಧಾನ ಎಂದರೆ ಪ್ರಜಾಪ್ರಭುತ್ವ ಪ್ರಜಾಪ್ರಭುತ್ವ ಎಂದರೆ ಪ್ರಜೆಗಳು ಅಂದರೆ ಪ್ರಜಾಪ್ರಭುತ್ವವನ್ನು ಯಶಸ್ವಿಗೊಳಿಸಬೇಕಾದರೆ ಪ್ರಜೆಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಮಾತ್ರ ಸಾಧ್ಯ ಎಂದು ಹೇಳಿದರು. ದೇಶದ ಸಂವಿಧಾನವು ಚುನಾವಣೆ ಪ್ರಕ್ರಿಯೆಗೆ ಅವಕಾಶ ನೀಡಿದೆ ಮತ್ತು 18 ವರ್ಷ ದಾಟಿದ ಪ್ರತಿಯೊಬ್ಬರಿಗೂ ಯಾವುದೇ ತಾರತಮ್ಯವಿಲ್ಲದೆ ಮತ ಚಲಾಯಿಸುವ ಹಕ್ಕನ್ನು ನೀಡಿದೆ. ನಾವು ಈ ಹಕ್ಕನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಪ್ರಜೆಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಸರ್ಕಾರವನ್ನು ಅಸ್ತಿತ್ವಕ್ಕೆ ತರುವ ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಹೆಗಲ ಮೇಲಿದೆ. ಗ್ರಾಮ ಪಂಚಾಯಿತಿ ಸದಸ್ಯನಿಂದ ಹಿಡಿದು ಲೋಕಸಭೆಯ ಸದಸ್ಯರನ್ನು ನೇರವಾಗಿಆಯ್ಕೆ ಮಾಡುವ ಹಕ್ಕು ನಮ್ಮೆಲ್ಲರಿಗಿದೆ. ಈ ದೇಶದ ಮೊದಲ ಪ್ರಜೆಯಾದ ರಾಷ್ಟ್ರಾಧ್ಯಕ್ಷರು ಸಹ ನಮ್ಮಿಂದ ಆಯ್ಕೆಗೊಂಡ ಪ್ರತಿನಿಧಿಗಳಿಂದ ಆಯ್ಕೆಯಾಗುತ್ತಾರೆ ಅಂದರೆ ರಾಷ್ಟ್ರಾಧ್ಯಕ್ಷರು ಪರೋಕ್ಷವಾಗಿ ಪ್ರಜೆಗಳಿಂದ ಆರಿಸಲ್ಪಡುತ್ತಾರೆ ಎಂದು ಹೇಳಿದರು.

ಆದರೆ ವಿಪರ್ಯಾಸವೇನೆಂದರೆ ಎಲ್ಲಾ ಚುನಾವಣೆಗಳಲ್ಲಿ ವಿದ್ಯಾವಂತರಿಗಿಂತ ಅವಿದ್ಯಾವಂತರು ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸುತ್ತಿದ್ದಾರೆ. ವಿದ್ಯಾವಂತರು ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುತ್ತಿದ್ದಾರೆ ಇದು ಒಳ್ಳೆಯ ಬೆಳವಣಿಗೆಯಲ್ಲ. ಅರ್ಹತೆ ಇಲ್ಲದ ಅಭ್ಯರ್ಥಿಗಳು ಚುನಾವಣೆಯಲ್ಲಿ ಸೋಲಬೇಕು ಮತ್ತು ಯೋಗ್ಯತೆಯಿಂದ ಕೂಡಿದ ವ್ಯಕ್ತಿಗಳು ಶಾಸಕಾಂಗವನ್ನು ಪ್ರವೇಶಿಸಬೇಕು ಆ ಮೂಲಕ ಒಂದು ಒಳ್ಳೆಯ ಸರ್ಕಾರ ಅಸ್ತಿತ್ವಕ್ಕೆ ಬರಬೇಕು ಆಗ ಮಾತ್ರ ಅಂತಹ ಸರ್ಕಾರದಿಂದ ಜನಸಾಮಾನ್ಯರಿಗೆ ಅನುಕೂಲವಾಗುವ ಯೋಜನೆಗಳು ಲಭಿಸಲು ಸಾಧ್ಯ. ಪ್ರಜಾಪ್ರಭುತ್ವದ ಯಶಸ್ಸು ನಿಂತಿರುವುದು ಪ್ರಜ್ಞಾವಂತಿಕೆಯಿಂದ ಕೂಡಿದ ಮತದಾರರು ಚಲಾಯಿಸುವ ಅಮೂಲ್ಯವಾದ ಮತದಿಂದ ಹಾಗಾಗಿ ಇಂದಿನ ಯುವಜನತೆ ಅತ್ಯಂತ ಪ್ರಜ್ಞಾಪೂರ್ವಕವಾಗಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಯಶಸ್ಸಿಗೆ ಕಾರಣವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಶ್ರೀಯುತ ರಾಘವೇಂದ್ರರವರು ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಶಿವಮೊಗ್ಗ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶ್ರೀ ನಾಗರಾಜ್ ವಿ ಕಾಗಲ್ಕರ್, ಮತ್ತು ಉದ್ಘಾಟಕರಾದ ಶ್ರೀ ಜಿ ಆರ್ ರಾಘವೇಂದ್ರ ಇವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಶ್ರೀ ನಾಗರಾಜ್ ವಿ ಕಾಗಲ್ಕರ್ ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಇವರು ಮಾತನಾಡುತ್ತಾ ಪ್ರತಿಯೊಬ್ಬರು ಅತ್ಯಂತ ವಿವೇಚನೆಯಿಂದ ಮತಚಲಾಯಿಸಬೇಕು ಚುನಾವಣೆಯ ದಿನವನ್ನು ರಜಾ ದಿನವೆಂದು ಭಾವಿಸದೆ ಕಡ್ಡಾಯವಾಗಿ ಮತವನ್ನು ಚಲಾಯಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು ರಾಷ್ಟ್ರೀಯ ಶಿಕ್ಷಣ ಸಮಿತಿಯ ಕುಲ ಸಚಿವರಾದ ಪ್ರೊ. ಟಿಎಸ್ ಹೂವಯ್ಯ ಗೌಡ ರವರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡು ಚುನಾವಣೆ ಪವಿತ್ರವಾದ ಮತ್ತು ದೇಶದ ಅಭಿವೃದ್ಧಿಗೆ ಅವಶ್ಯಕವಾಗಿದ್ದು ಪ್ರಜ್ಞಾಪೂರ್ವಕವಾಗಿ ಮತ ಚಲಾಯಿಸಿದರೆ ಪ್ರಜಾಪ್ರಭುತ್ವ ಹಾಗೂ ದೇಶ ಗಟ್ಟಿಯಾಗುತ್ತದೆ ಆ ಮೂಲಕ ಒಂದು ಯಶಸ್ವಿ ಸರ್ಕಾರವನ್ನು ಜಾರಿಗೆ ತಂದ ಸಂತೋಷ ಪ್ರಜೆಗಳಿಗಾಗುತ್ತದೆ ಎಂದು ಹೇಳಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಎಸ್ ಚನ್ನಪ್ಪ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಪವಿತ್ರ ಪ್ರಾರ್ಥಿಸಿದರು.

ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರು ಮತ್ತು ಶಿವಮೊಗ್ಗ ತಾಲ್ಲೂಕು ಇ ಎಲ್‌ಸಿ ಮತ್ತು ಸಿ ಜೆ ಸಿ ನೋಡಲ್ ಅಧಿಕಾರಿಯಾದ ಡಾ. ಸಂತೋಷ್ ಹೆಚ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾದ ಡಾ. ಆಂತೋನಿ ಫ್ರಾನ್ಸಿಸ್ ವಂದಿಸಿದರು. ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿಯಾದ ಕುಮಾರಿ ಖತಿಜಾರವರು ಕಾರ್ಯಕ್ರಮವನ್ನು ನಿರೂಪಿಸಿದರು.

ವರದಿ ಮಂಜುನಾಥ್ ಶೆಟ್ಟಿ…