ಶಿವಮೊಗ್ಗ: ಪ್ರೀತಿ, ಸಂಬಂಧ ಮತ್ತು ವಿಶ್ವಾಸ ಶಾಶ್ವತವಾಗಿರಬೇಕು. ಅದು ಮುಖ್ಯವೇ ಹೊರತು ಅಧಿಕಾರವಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದ್ದಾರೆ.
ಅವರು ಇಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ಸಹ್ಯಾದ್ರಿ ಸಂಘ, ಷಡಾಕ್ಷರಿ ಅಭಿಮಾನಿ ಬಳಗ, ಹಿತೈಷಿಗಳು ಹಾಗೂ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಅವರ 43 ನೇ ಹುಟ್ಟುಹಬ್ಬದ ಆಚರಣೆ ವೇಳೆ ಮಾತನಾಡಿದರು.ನಾನು ಬೆಂಗಳೂರಿನಲ್ಲಿ ಸರ್ಕಾರಿ ನೌಕರರು ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಹಮ್ಮಿಕೊಂಡಿದ್ದು, ಅಲ್ಲಿ ಭಾಗವಹಿಸಬೇಕಿತ್ತು. ಆದರೆ, ಶಿವಮೊಗ್ಗ ನನ್ನ ಶಕ್ತಿ ಕೇಂದ್ರ. ಸ್ನೇಹಿತರ ಒತ್ತಡಕ್ಕೆ ಮಣಿದು ಇಲ್ಲಿ ಭಾಗವಹಿಸಿದ್ದೇನೆ. ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿಯಾಗಿದ್ದೇನೆ. ನನ್ನ ಎಲ್ಲಾ ಯಶಸ್ಸಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ ಅವರು ಪ್ರೇರಣೆಯಾಗಿದ್ದಾರೆ ಎಂದರು.ಅಧಿಕಾರ ಎಂಬುದು ಶಾಶ್ವತವಲ್ಲ, ಅಧಿಕಾರ ಇದ್ದಾಗ ನಾವು ಮಾಡಿದ ಸೇವೆ ಶಾಶ್ವತವಾಗಿರುತ್ತದೆ. ಈ ಹಂತ ತಲುಪಲು ಅನೇಕರು ನನಗೆ ಬೆಂಬಲ ನೀಡಿದ್ದಾರೆ. ನನಗೆ ಏನಾದರೂ ಗೌರವ ಸಿಕ್ಕಿದ್ದರೆ ಅದು ಎಲ್ಲಾ ನಿಮಗೇ ಸೇರಬೇಕಾಗಿದೆ ಎಂದರು.
ನನ್ನ ಸೇವಾವಧಿಯಲ್ಲಿ ಸರ್ಕಾರಿ ನೌಕರರ ಅನೇಕ ಬೇಡಿಕೆಗಳ ಈಡೇರಿಕೆ ಜೊತೆಗೆ ವಿವಿಧ ದಾನಿಗಳ ನೆರವಿನಿಂದ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದು, ಸಾವಿರಾರು ಮಕ್ಕಳಿಗೆ ಬ್ಯಾಗ್, ನೋಟ್ ಬುಕ್ ಇನ್ನಿತರ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿದ ತೃಪ್ತಿ ಇದೆ. ವಿದ್ಯಾರ್ಜನೆಗೆ ಕೂಡ ನೆರವು ನೀಡಲಾಗಿದೆ. ನನ್ನೊಂದಿಗೆ ಸಹಕರಿಸಿದ ಎಲ್ಲರಿಗೂ ವಂದನೆಗಳು ಎಂದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾ. ಸತೀಶ್ ಕುಮಾರ್ ಶೆಟ್ಟಿ ಮಾತನಾಡಿ, ಷಡಾಕ್ಷರಿ ಅವರು ಚಲನಶೀಲ ಮತ್ತು ಕ್ರಿಯಾಶೀಲ ವ್ಯಕ್ತಿಯಾಗಿದ್ದಾರೆ. ತಮ್ಮ ಕ್ರಿಯಾಶೀಲತೆಯಿಂದಲೇ ಗುರುತಿಸಿಕೊಂಡು ನಿಸ್ಸೀಮ ಎನಿಸಿಕೊಂಡವರು. 42 ವರ್ಷದ ಸಣ್ಣ ವಯಸ್ಸಿನಲ್ಲೇ ತಮ್ಮ ಸಾಧನೆಯಿಂದಲೇ ಉನ್ನತ ಸ್ಥಾನಕ್ಕೇರಿದ್ದಾರೆ. ಅವರ ಆಡಳಿತಾವಧಿಯಲ್ಲಿ ಸರ್ಕಾರಿ ನೌಕರರ ಹಲವು ವರ್ಷಗಳ ಬೇಡಿಕೆಯನ್ನು ಅಧಿಕಾರಿ ಮತ್ತು ಆಡಳಿತ ಮುಖ್ಯಸ್ಥರ ಜೊತೆ ಸಂಪರ್ಕ ಬೆಳೆಸಿ ತ್ವರಿತವಾಗಿ ಬಗೆಹರಿಸಿದ್ದಾರೆ ಎಂದರು. ನಾಯಕತ್ವದ ಎಲ್ಲಾ ಗುಣಗಳನ್ನು ಹೊಂದಿರುವ ಅವರು ಹಂತಹಂತವಾಗಿ ಬೆಳೆದು ಲಕ್ಷಾಂತರ ಸರ್ಕಾರಿ ನೌಕರರ ಸಂಕಷ್ಟದಲ್ಲಿ ಭಾಗಿಯಾಗಿದ್ದಾರೆ. ಸ್ವಾರ್ಥವಿಲ್ಲದೇ ಜನಪರ ಕೆಲಸ ಮಾಡಿ ಬಡವರಿಗೆ ಮತ್ತು ಸಂಕಷ್ಟದಲ್ಲಿರುವವರಿಗೆ ಸ್ಪಂದಿಸಿದ್ದಾರೆ. ಹಾಗಾಗಿ ಅವರಿಗೆ ಒಬ್ಬ ರಾಜಕಾರಣಿಗಿಂತಲೂ ಹೆಚ್ಚಿನ ಅಭಿಮಾನಿಗಳಿದ್ದಾರೆ ಎಂದರು.
ಸೂಡಾ ಮಾಜಿ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್ ಮಾತನಾಡಿ, ಅತ್ಯಂತ ಕ್ರಿಯಾಶೀಲ ವ್ಯಕ್ತಿಯಾಗಿರುವ ಷಡಾಕ್ಷರಿ ಅವರು ತಮ್ಮ ಗುಣ ನಡತೆ ಹಾಗೂ ಜನಪರ ಕಾಳಜಿಯಿಂದ ಜನಪ್ರಿಯರಾಗಿದ್ದಾರೆ. ಸರ್ಕಾರಿ ನೌಕರರು ಮಾತ್ರವಲ್ಲದೇ ಮುಖ್ಯಮಂತ್ರಿಗಳಾದಿಯಾಗಿ ಪ್ರತಿಯೋರ್ವ ರಾಜಕಾರಣಿ ಅವರ ಮಾತನ್ನು ಗೌರವಿಸುತ್ತಾರೆ. ಅವರನ್ನು ಸಂಪರ್ಕಿಸಿದರೆ ಎಲ್ಲಾ ಕೆಲಸವಾಗುತ್ತದೆ ಎನ್ನುವಷ್ಟರಮಟ್ಟಿಗೆ ಅವರು ತಮ್ಮ ವರ್ಚಸ್ಸು ಬೆಳೆಸಿಕೊಂಡಿದ್ದಾರೆ. ಇನ್ನೂ ಹೆಚ್ಚಿನ ಸ್ಥಾನ ಮಾನ ಷಡಾಕ್ಷರಿ ಅವರಿಗೆ ಸಿಗಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ವೀರಶೈವ ಸಮಾಜದ ಎನ್.ಜೆ. ರಾಜಶೇಖರ್, ಟಿ.ಬಿ. ಜಗದೀಶ್, ಸಿಮ್ಸ್ ಆಡಳಿತ ಮಂಡಳಿ ಸದಸ್ಯರಾದ ದಿವಾಕರ್ ಶೆಟ್ಟಿ ,ಸಂತೋಷ್ ಬಳ್ಳೆಕೆರೆ, ರಾಜೇಶ್ ಕಾಮತ್, ಉಮೇಶ್, ಪಾಲಿಕೆ ಸದಸ್ಯ ವಿಶ್ವನಾಥ್, ಅಶ್ವತ್ತನಾರಾಯಣ ಶೆಟ್ಟಿ, ಸೂರ್ಯನಾರಾಯಣ್, ಅಪರ ಜಿಲ್ಲಾಧಿಕಾರಿ ನಾಗೇಂದ್ರ ಹೊನ್ನಳಿ, ಉಪ ವಿಭಾಗಾಧಿಕಾರಿ ಎಸ್.ಬಿ. ದೊಡ್ಡಗೌಡರ್ ಮೊದಲಾದವರಿದ್ದರು.ಕೇಕ್ ಕಟ್ ಮಾಡುವುದರ ಮೂಲಕ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಷಡಾಕ್ಷರಿ ಅವರು ಸ್ಥಾಪಿಸಿದ ದಾನಪೀಠದ ಮೂಲಕ ವಿದ್ಯಾರ್ಥಿಯೊಬ್ಬರ ಶಿಕ್ಷಣಕ್ಕೆ 10 ಸಾವಿರ ರೂ. ಸಹಾಯಧನ ನೀಡಲಾಯಿತು.