ಶಿವಮೊಗ್ಗ: ರಾಜ್ಯಮಟ್ಟದ 21 ನೇ ವುಶು ಚಾಂಪಿಯನ್ ಶಿಪ್ ಪಂದ್ಯಾವಳಿ ಆಗಸ್ಟ್ 6 ರಿಂ 9 ರವರೆಗೆ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ರಾಜ್ಯ ವುಶು ಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಶೋಕ್ ಮೊಕಾಶಿ ಹೇಳಿದರು.

ಅವರು ಇಂದು ಮಥುರಾ ಸೆಂಟ್ರಲ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಜಿಲ್ಲಾ ವುಶು ಸಂಸ್ಥೆ ಆಶ್ರಯದಲ್ಲಿ ಈ ಪಂದ್ಯಾವಳಿ ಆಯೋಜಿಸಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 800 ಬಾಲಕರು, ಬಾಲಕಿಯರು, ತರಬೇತುದಾರರು, ನಿರ್ಣಾಯಕರು ಭಾಗವಹಿಸಲಿದ್ದಾರೆ. ಭಾಗವಹಿಸುವ ಎಲ್ಲರಿಗೂ ಶಿವಮೊಗ್ಗ ಸಂಸ್ಥೆಯ ವತಿಯಿಂದ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.ವುಶು ಎಂಬ ಕ್ರೀಡೆಯು ಅಂತರರಾಷ್ಟ್ರೀಯ ಮನ್ನಣೆ ಪಡೆದಿದೆ. ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ವುಶು ಆಟಗಾರರನ್ನು ಕೂಡ ಸೇರಿಸಲಾಗಿದೆ. ಇತ್ತೀಚೆಗೆ ಜಗತ್ತಿನ ಹಲವು ದೇಶಗಳಲ್ಲಿ ಈ ಕ್ರೀಡೇ ಪ್ರಖ್ಯಾತವಾಗಿದೆ. ಭಾರತ ಸರ್ಕಾರ ಕೂಡ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ ಕೂಡ ನೀಡಿದೆ ಎಂದರು.

ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ 6 ರಿಂದ 10 ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರಾಧಿಕಾರದಿಂದ 10 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಹಾಗೆಯೇ ವಿಜೇತರಾದ ಎಸ್.ಸಿ. ಹಾಗೂ ಎಸ್.ಟಿ. ಕ್ರೀಡಾಪಟುಗಳಿಗೆ 1 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು ಎಂದರು.ಪಂದ್ಯಾವಳಿಯ ಉದ್ಘಾಟನಾ ಸಮಾರಂಭಕ್ಕೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಸಂಗಮೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ, ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಿ ಪ್ರಸಾದ್ ಮುಂತಾದವರು ಆಗಮಿಸಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವುಶು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಘನಿ, ಉಪಾಧ್ಯಕ್ಷ ಎಸ್. ಮಂಜುನಾಥ್, ಪದಾಧಿಕಾರಿಗಳಾದ ಅಲ್ಲಾ ಭಕ್ಷಿ, ಮೊಹ್ಮದ್ ಇರ್ಫಾನ್, ಸಂಗಮೇಶ್ ಇದ್ದರು.

ವರದಿ ಮಂಜುನಾಥ್ ಶೆಟ್ಟಿ…