ಶಿವಮೊಗ್ಗ: ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿಯಾಗಿ ರೇಖಾ ರಂಗನಾಥ್ ಇಂದು ಅಧಿಕಾರ ಸ್ವೀಕರಿಸಿದರು. 

ಪಾಲಿಕೆಯ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಶಿವಮೊಗ್ಗದ ನಗರದ ಜನತೆಗೆ ಸೌಲಭ್ಯ ಕಲ್ಪಿಸಿಕೊಡುವ ಆಡಳಿತ ಪಕ್ಷಕ್ಕೆ ಚುಟುಕು ಮುಟ್ಟಿಸುವ ಕೆಲಸ ಮಾಡಲಾಗುವುದು ಎಂದರು.ಪಕ್ಷದ ಹಿರಿಯ ಮುಖಂಡರು, ಸದಸ್ಯರ ಮಾರ್ಗದರ್ಶನ ಸಲಹೆ ಪಡೆದು ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಸಮರ್ಥ ಹಾಗೂ ರಚನಾತ್ಮಕ ವಿಪಕ್ಷವಾಗಿ ಕೆಲಸ ಮಾಡುತ್ತೇವೆ. ಪಕ್ಷ ನನಗೆ ನಂಬಿ ನೀಡಿರುವಂತಹ ಜವಾಬ್ದಾರಿಯನ್ನು ನಿಷ್ಠೆಯಿಂದ ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಜನರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಶ್ರಮಿಸುತ್ತೇನೆ ಸಾರ್ವಜನಿಕರು ತಮ್ಮ ಯಾವುದೇ ಸಮಸ್ಯೆಗಳಿದ್ದರೂ ನನ್ನ ಬಳಿ ಬಂದು ಹೇಳಿಕೊಳ್ಳಬಹುದು. ಜನರಿಗೆ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಅವರಿಗೆ ತಲುಪಿಸಲು ನಾನು ನೆರವಾಗುತ್ತೇನೆ ಎಂದರು.

ಕುಡಿಯುವ ನೀರಿನ ಸಮಸ್ಯೆ, ಮಂದಗತಿಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳು, ಬೀದಿ ದೀಪ, ಒಳಚರಂಡಿ ಮುಂತಾದ ಮೂಲ ಸೌಲಭ್ಯಗಳ ಬಗ್ಗೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸಾರ್ವಜನಿಕರ ಪರವಾಗಿ ಧ್ವನಿ ಎತ್ತುತ್ತೇನೆ. ಪಾಲಿಕೆಯಲ್ಲಿ ನಡೆಯುವ ಅವ್ಯವಹಾರ ತಡೆಯಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದರು.ಈ ಸಂದರ್ಭದಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ, ಮೇಯರ್ ಸುನಿತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಪಾಲಿಕೆಯ ಸದಸ್ಯರು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಸಿ. ಸುಂದರೇಶ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್, ಹೆಚ್.ಪಿ. ಗಿರೀಶ್, ಹೆಚ್.ಸಿ. ಯೋಗೀಶ್, ಕೆ. ರಂಗನಾಥ್ ಸೇರಿದಂತೆ ಅನೇಕ ಗಣ್ಯರು ಪಕ್ಷಬೇಧ ಮರೆತು ಶುಭ ಹಾರೈಸಿದರು. ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.   

ವರದಿ ಮಂಜುನಾಥ್ ಶೆಟ್ಟಿ…