ಶಿವಮೊಗ್ಗ: ನಗರದ ಡಿವಿಎಸ್ ಕಾಲೇಜು ಸಮೀಪವಿರುವ ಬಸವೇಶ್ವರ ವೃತ್ತದಲ್ಲಿ ಗಾಂಧಿ ಪಾರ್ಕ್ ಮುಂಭಾಗದಲ್ಲಿ ವಿಶ್ವಗುರು ಬಸವಣ್ಣ ಪುತ್ಥಳಿ ಅನಾವರಣಗೊಳಿಸಿ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಭಾನುವಾರ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಶ್ರೀ ಬಸವಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಸಲ್ಲಿಸಿದರು.

ಲಂಡನ್ ನಲ್ಲಿರುವ ನೀರಜ್ ಪಾಟೀಲ್ ಅವರು ಶ್ರೀ ಬಸವೇಶ್ವರ ಪುತ್ಥಳಿಯನ್ನು ಶಿವಮೊಗ್ಗಕ್ಕೆ ಕಳುಹಿಸಿಕೊಟ್ಟಿದ್ದರು. ಕಳೆದ ವರ್ಷ ಶಿವಮೊಗ್ಗ ನಗರದ ಬಸವೇಶ್ವರ ವೃತ್ತದಲ್ಲಿ ಪುತ್ಥಳಿ ಅನಾವರಣಗೊಳಿಸಿ ಲೋಕಾರ್ಪಣೆ ಮಾಡಲಾಗಿತ್ತು. ವರ್ಷ ಆಚರಣೆ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳು ಸಂಭ್ರಮ ಆಚರಿಸಿದವು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕ, ನಗರ ಘಟಕ, ಜಿಲ್ಲಾ ಮಹಿಳಾ ಘಟಕ, ಜಿಲ್ಲಾ ಯುವ ಘಟಕ, ಶರಣ ಸಾಹಿತ್ಯ ಪರಿಷತ್, ಬಸವ ಕೇಂದ್ರ ಮತ್ತು ನಗರದ ಇತರ ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು. ಐತಿಹಾಸಿಕ ಕಾರ್ಯಕ್ರಮದ ಸವಿ ನೆನಪಿನ ವರ್ಷಾಚರಣೆ ಕಾರ್ಯಕ್ರಮದಲ್ಲಿ ಎಲ್ಲರಿಗೂ ಸಿಹಿ ಹಂಚಲಾಯಿತು.

ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್ ಅವರು ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಏಳುಮಲೈ, ಪಾಲಿಕೆ ಸದಸ್ಯ ಯೋಗೇಶ್, ಸುರೇಖಾ ಮುರಳೀಧರ್, ಬಸವಕೇಂದ್ರದ ಬೆನಕಪ್ಪ, ಸೂಡಾ ನಿಕಟಪೂರ್ವ ಅಧ್ಯಕ್ಷ ಜ್ಯೋತಿಪ್ರಕಾಶ್, ನಗರ ಘಟಕದ ಅಧ್ಯಕ್ಷ ರಾಜಶೇಖರ್, ಮಲ್ಲಿಕಾರ್ಜುನ ಕಾನೂರ್, ಸುರೇಖಾ, ಮೋಹನ್ ಕುಮಾರ್, ಪರಮೇಶ್ವರ, ಯುವ ಘಟಕದ ಅಧ್ಯಕ್ಷ ಶಿವಯೋಗಿ ಹಂಚಿನಮನೆ, ತಾಲ್ಲೂಕು ಘಟಕದ ಅಧ್ಯಕ್ಷ ಜಿ.ವಿಜಯಕುಮಾರ್, ಪಾಲಾಕ್ಷಪ್ಪ, ಮೋಹನ್ ಮತ್ತಿತರರು ಇದ್ದರು.

ವರದಿ ಮಂಜುನಾಥ್ ಶೆಟ್ಟಿ…