ಶಿವಮೊಗ್ಗ ಜಿಲ್ಲೆಯಲ್ಲಿ ಇತ್ತೀಚೆಗೆ ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಿ ರೈತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅತಿವೃಷ್ಟಿ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಕರೆಯಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಅತಿವೃಷ್ಟಿಯಿಂದ 1092 ಹೆಕ್ಟೇರ್ ಭತ್ತ ಹಾಗೂ 281 ಹೆಕ್ಟೇರ್ ಮುಸುಕಿನ ಜೋಳ ಸೇರಿದಂತೆ ಒಟ್ಟಾರೆಯಾಗಿ 1308 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆಗಳಿಗೆ ಹಾನಿಯನ್ನು ಅಂದಾಜಿಸಲಾಗಿದೆ. ಪ್ರಸ್ತುತ ಭತ್ತದ ಗದ್ದೆ ಮತ್ತು ಮೆಕ್ಕೆ ಜೋಳ ಹಾಗೂ ಇತರ ಕೃಷಿ ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗಿದ್ದು, ವಾರದ ಒಳಗಾಗಿ ಸಮೀಕ್ಷೆ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸಲಾಗುವುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಜಿ.ಸಿ.ಪೂರ್ಣಿಮಾ ಅವರು ತಿಳಿಸಿದರು.

ಅತಿವೃಷ್ಟಿಯಿಂದಾಗಿ ಭದ್ರಾವತಿ ತಾಲೂಕಿನಲ್ಲಿ 189ಮನೆಗಳು ಜಲಾವೃತಗೊಂಡಿದ್ದು, ಇವುಗಳ ಪೈಕಿ 82ಮನೆಗಳಿಗೆ 8.20ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆಯಾಗಿ 711 ಮನೆಗಳು ಭಾಗಶಃ ಹಾನಿ, 192ಮನೆಗಳು ತೀವ್ರ ಹಾನಿ ಹಾಗೂ 58ಮನೆಗಳು ಪೂರ್ಣ ಹಾನಿಗೊಂಡಿವೆ. 62 ಕೊಟ್ಟಿಗೆ ಮನೆಗಳು ಸಹ ಹಾನಿಗೀಡಾಗಿವೆ. ರಾಜೀವ್ ಗಾಂಧಿ ವಸತಿ ನಿಗಮದ ಪೋರ್ಟಲ್‍ನಲ್ಲಿ ಹಾನಿ ವಿವರಗಳನ್ನು ದಾಖಲಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಅತಿಮಳೆಯಿಂದಾಗಿ 4 ಮಾನವ ಜೀವ ಹಾನಿ ಉಂಟಾಗಿದ್ದು, 3ಪ್ರಕರಣಗಳಲ್ಲಿ ಒಟ್ಟು 15ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. 9ಜಾನುವಾರುಗಳು ಸಾವಿಗೀಡಾಗಿದ್ದು, 1.50ಲಕ್ಷ ರೂ. ಪರಿಹಾರ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ತಿಳಿಸಿದರು.

ಮಳೆಯಿಂದಾಗಿ 385ಕಿಮೀ ಗ್ರಾಮೀಣ ರಸ್ತೆಗಳಿಗೆ 9.25 ಕೋಟಿ ರೂ. ಹಾನಿ ಅಂದಾಜಿಸಲಾಗಿದೆ. 63 ಸೇತುವೆ ಮತ್ತು ಮೋರಿಗಳಿಗೆ 9.94ಕೋಟಿ ರೂ. ಹಾನಿ ಉಂಟಾಗಿದೆ. 546 ವಿದ್ಯುತ್ ಕಂಬಗಳಿಗೆ 32.31 ಲಕ್ಷ ರೂ, 6 ಪರಿವರ್ತಕಗಳು ಹಾನಿಗೀಡಾಗಿದ್ದು 1.86ಲಕ್ಷ ರೂ, 10.90ಕಿಮೀ ಉದ್ದದ ಒಟ್ಟು ಲೈನ್ ಹಾನಿಗೀಡಾಗಿದ್ದು, 5.20ಲಕ್ಷ ರೂ. ಹಾನಿ ಅಂದಾಜಿಸಲಾಗಿದೆ. 226ಶಾಲಾ ಕಟ್ಟಡಗಳಿಗೆ ಅಂದಾಜು 6.77ಕೋಟಿ ರೂ, 219 ಅಂಗನವಾಡಿಗಳಿಗೆ 5.27ಕೋಟಿ ರೂ ಹಾಗೂ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 45ಲಕ್ಷ ರೂ. ಹಾಗೂ 82 ಕೆರೆಗಳಿಗೆ 4.04ಕೋಟಿ ರೂ ಹಾನಿ ಅಂದಾಜಿಸಲಾಗಿದೆ ಎಂದು ಅವರು ಹೇಳಿದರು.

ಅತಿವೃಷ್ಟಿಯಿಂದಾಗಿ ನಾಶನಷ್ಟ ಉಂಟಾಗಬಹುದಾದ 163 ಗ್ರಾಮಗಳನ್ನು ಗುರುತಿಸಲಾಗಿದ್ದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ರಕ್ಷಣಾ ತಂಡಗಳು ಜಿಲ್ಲೆಯಲ್ಲಿ ಸನ್ನದ್ಧ ಸ್ಥಿತಿಯಲ್ಲಿದ್ದು ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ತೆರಳದಂತೆ ಆದೇಶ ನೀಡಲಾಗಿದೆ ಎಂದು ಅವರು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ವರದಿ ಮಂಜುನಾಥ್ ಶೆಟ್ಟಿ…