ಶಿವಮೊಗ್ಗ: ಟೈಲರ್ಸ್ ಕ್ಷೇಮ ನಿಧಿ ಮಂಡಳಿ ರಚಿಸಿ ಆ ಮೂಲಕ ಭವಿಷ್ಯನಿಧಿ ಮತ್ತು ಮಾಸಿಕ ಪಿಂಚಣಿ ಯೋಜನೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್ ಜಿಲ್ಲಾ ಶಾಖೆ ವತಿಯಿಂದ ಇಂದು ಸೈನ್ಸ್ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್ ರಾಜ್ಯಮಟ್ಟದ ಸಂಘಟನೆಯು 23 ವರ್ಷಗಳ ಹಿಂದೆ ಅಸ್ವಿತ್ವಕ್ಕೆ ಬಂದಿದ್ದು, ರಾಜ್ಯಾದ್ಯಾಂತ ಹೊಲಿಗೆ ಕೆಲಸದಿಂದ ಜೀವನ ಸಾಗಿಸುತ್ತಿರುವ ಸುಮಾರು 10 ಲಕ್ಷಕ್ಕೂ ಹೆಚ್ಚು ಸ್ತ್ರೀ ಪುರುಷರಿಗೆ ಜೀವನ ಭದ್ರತೆಯನ್ನು ಒದಗಿಸಲು ಟೈಲರ್ ಕ್ಷೇಮನಿಧಿ ಮಂಡಳಿಯನ್ನು ರಚಿಸುವಂತೆ ಕಳೆದ 22 ವರ್ಷಗಳಿಂದ ಮನವಿ ಹಾಗೂ ಶಾಂತ ರೀತಿಯ ಚಳುವಳಿಗಳ ಮುಖೇನ ರಾಜ್ಯ ಸರಕಾರವನ್ನು ಒತ್ತಾಯಿಸುತ್ತಾ ಬಂದಿದ್ದರು ಬೇಡಿಕೆ ಇದುವರೆಗು ಈಡೇರಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಈ ನಿಟ್ಟಿನಲ್ಲಿ ಪ್ರಸ್ತುತ ರಾಜ್ಯ ಸರಕಾರವು ಟೈಲರ್ ಕ್ಷೇಮನಿಧಿ ಮಂಡಳಿ ರಚಿಸುವ ಮೂಲಕ ರಾಜ್ಯಾದ್ಯಂತ ಬಟ್ಟೆ, ಹೊಲಿದು ಜೀವನ ಸಾಗಿಸುತ್ತಿರುವ ಟೈಲರ್ ವೃತ್ತಿಬಾಂಧವರಿಗೆ ಕೂಡಲೇ ಟೈಲರ್ ಕ್ಷೇಮನಿಧಿ ಮಂಡಳಿ ರಚಿಸಬೇಕು. ಆ ಮೂಲಕ ಭವಿಷ್ಯನಿಧಿ ಪಿಂಚಣಿ ಯೋಜನೆಯನ್ನು ಕೂಡಲೇ ಜಾರಿಗೊಳಿಸಬೇಕು. ಇದರೊಂದಿಗೆ ಆರೋಗ್ಯ ವಿಮೆಯನ್ನು ಜಾರಿಗೊಳಿಸಬೇಕು.
ಈವರೆಗೆ ಹಣ ಸಂದಾಯ ಮಾಡಿದ 60 ವರ್ಷ ತುಂಬಿದ ಎಲ್ಲಾ ಎನ್ಪಿಎಸ್ ಲೈಟ್ ಫಲಾನುಭವಿಗಳ ನಿವೃತ್ತಿ ವೇತನ ಘೋಷಣೆ ಮಾಡುವುದು ಮತ್ತು ಮಾಸಿಕ ರೂ. 3,000ವರೆಗೆ ನಿವೃತ್ತಿ ವೇತನ ನೀಡಬೇಕು. ಹೊಲಿಗೆ ಕೆಲಸಗಾರರ ಹೆಣ್ಣು ಮಕ್ಕಳಿಗೆ ವಿವಾಹ ಧನ ಮತ್ತು ಹೆರಿಗೆ ಭತ್ಯೆ ನೀಡಬೇಕು. ಹೊಲಿಗೆ ಕೆಲಸಗಾರರ ಸ್ವಂತ ವಾಸಕ್ಕಾಗಿ ಮನೆ ಕೊಂಡುಕೊಳ್ಳಲು, ಮನೆ ಕಟ್ಟಲು ಅಥವಾ ಪುನರ್ ನಿರ್ಮಾಣ ಮಾಡಲು ಧನಸಹಾಯ ಮತ್ತು ಕಡಿಮೆ ಬಡ್ಡಿಯ ಸಾಲ ನೀಡಬೇಕು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನವನ್ನು ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ಜೆ.ಎಸ್.ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ಟಿ.ರವೀಂದ್ರ, ಉಪಾಧ್ಯಕ್ಷರಾದ ಚಂದ್ರಶೇಖರ್, ಗೋಪಾಲ್ ಶೆಟ್ಟಿ ,ಶ್ರೀಧರ್ ವಹಿಸಿದ್ದು, 500 ಕ್ಕೂ ಹೆಚ್ಚು ಟೈರ್ಸ್ಗೇಳು ಭಾಗವಹಿಸಿದ್ದರು.