ಶಿವಮೊಗ್ಗ: ಭಾರತೀಯ ಜನತಾ ಪಕ್ಷದ ನೀತಿ, ನಿಯಮ, ಶಿಸ್ತು, ಸಿದ್ದಾಂತಗಳನ್ನು ಪರಿಪಾಲನೆ ಮಾಡಿದಾಗ ನಾಯಕತ್ವದ ಗುಣ ಬೆಳೆಯುತ್ತದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಅವರು ಇಂದು ನಗರದ ಶುಭಶ್ರೀ ಸಮುದಾಯ ಭವನದಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಹೋರಾಟಕ್ಕೆ ಇಳಿಯುವುದು ಮತ್ತು ಪಕ್ಷದ ಚಟುಚಟಿಕೆಗಳಲ್ಲಿ ಭಾಗವಹಿಸುವುದು ಹಿಂದೆ ಬೆರಳಿಣಿಯಷ್ಟು ಮಾತ್ರ ಇತ್ತು. ಆದರೆ ಈಗ ಎಲ್ಲಾ ಚಟುವಟಿಕೆಗಳಲ್ಲೂ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳುತ್ತಿದ್ದಾರೆ. ಸಂಸಾರವನ್ನು ತೂಗಿಸಿಕೊಂಡು ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ ಸಂಗತಿ ಎಂದರು.ಪಕ್ಷದ ಮಹಿಳಾ ಕಾರ್ಯಕರ್ತರು ತಮ್ಮ ಸುತ್ತಮುತ್ತಲು ಯಾರೇ ಸಂಕಷ್ಟ ತೋಡಿದಾಗ ಅದನ್ನು ಬಗೆಹರಿಸುವ ಪ್ರಯತ್ನ ಮಾಡಬೇಕು ಆಗ ನಿಮ್ಮ ಮೇಲೆ ಹಾಗೂ ನಿಮ್ಮ ಪಕ್ಷದ ಮೇಲೆ ಅವರಿಗೆ ವಿಶ್ವಾಸ ಬರುತ್ತದೆ. ನಿಮ್ಮಿಂದ ಉಪಕಾರ ಪಡೆದವರು ನಿಮ್ಮ ಪಕ್ಷಕ್ಕೂ ಸೇರಿಕೊಳ್ಳುತ್ತಾರೆ ಎಂದರು.

ಅನೇಕ ರಾಷ್ಟçಗಳಲ್ಲಿ ಹೆಣ್ಣನ್ನು ಭೋಗದ ವಸ್ತುವನ್ನಾಗಿ ಕಾಣುತ್ತಾರೆ. ಆದರೆ ಭಾರತೀಯ ಮಹಿಳೆಯರು ತಮ್ಮ ಸಂಸ್ಕಾರ, ಸಂಸ್ಕೃತಿ ಮತ್ತು ಕುಟುಂಬ ನಿರ್ವಹಣೆಯ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಪ್ರಪಂಚದ ಇತರೆ ದೇಶಗಳಲ್ಲಿ ಕೌಟುಂಬಿಕ ನೆಮ್ಮದಿ ಇಲ್ಲ. ಇಂದು ಮದುವೆ ನಾಳೆ ಡೈವೋರ್ಸ್ ಎನ್ನುವ ಮಟ್ಟಿಗೆ ಇದೆ. ಆದರೆ ಭಾರತದಲ್ಲಿ ಕೌಟುಂಬಿಕ ಸೌಹಾರ್ಧತೆ ಇದೆ. ವಾರಣಾಸಿಯಲ್ಲಿ ಮಸೀದಿಯೊಳಗೆ ಲಿಂಗವಿತ್ತು. 5 ಜನ ಮಹಿಳೆಯರು ನಮಗೆ ಮಸೀದಿಯೊಳಗಿನ ಲಿಂಗಕ್ಕೆ ಪೂಜೆ ಮಾಡಲು ಅನುಮತಿ ನೀಡಬೇಕೆಂದು ನ್ಯಾಯಾಲಯಕ್ಕೆ ಹೋಗಿದ್ದರ ಪರಿಣಾಮ ನ್ಯಾಯಾಲಯ ಮಸೀದಿ ಸರ್ವೇಗೆ ಆದೇಶ ನೀಡಿತ್ತು. ಷರತ್ತು ಮೇರೆಗೆ ಪೂಜೆಗೂ ಅವಕಾಶ ನೀಡಿತ್ತು ಇದು ಮಹಿಳೆಯರ ತಾಕತ್ತು.

ಇಂದಿರಾಗಾಂಧಿ ಓರ್ವ ಮಹಿಳೆಯಾಗಿ ಪಾಕಿಸ್ತಾನವನ್ನು ಸದೆಬಡಿದಾಗ ಅಂದಿನ ವಿಪಕ್ಷ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಅವರು ಪಕ್ಷಬೇಧ ಮರೆತು ಇಂದಿರಾಗಾಂಧಿಯನ್ನು ದುರ್ಗೆಯ ರೂಪದಲ್ಲಿ ವರ್ಣಿಸಿದಲ್ಲದೆ ಸಹಕಾರವನ್ನು ನೀಡಿದ್ದರು. ರಾಷ್ಟ್ರೀಯತೆಯ ಪ್ರಶ್ನೆ ಬಂದಾಗ ಹೆಣ್ಣುಮಕ್ಕಳ ಪಾತ್ರವು ಅತ್ಯಂತ ಮಹತ್ವದ್ದು. ಎಲ್ಲರೂ ಸೇರಿ ಸಮಾಜದ, ದೇಶದ ಕಾರ್ಯಗಳಲ್ಲಿ ಕೈ ಜೋಡಿಸಿ ಸೇವೆ ಮಾಡೋಣ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ವಿದ್ಯಾಲಕ್ಷೀಪತಿ ಪ್ರಸ್ತಾವಿಕ ಮಾತುಗಳನ್ನಾಡಿದರು.ರಾಜ್ಯ ಪ್ರಕೋಷ್ಠಗಳ ಸಂಯೋಜಕರಾದ ಎಂ.ಬಿ.ಭಾನುಪ್ರಕಾಶ್, ಪ್ರಮುಖರಾದ ರೇಣುಕಾ ನಾಗರಾಜ್, ಸುನೀತಾ ಜಗದೀಶ್, ಪದ್ಮಿನಿರಾವ್, ಶಿವರಾಜ್, ಗೀತಾ ಸಂದಾನಂದ ಶೆಟ್ಟಿ, ಕಲ್ಪನಾ ತಳವಾಟ, ಸಾಹಿವರಪ್ರಸಾದ್, ಹಾಗೂ ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…