ಶಿವಮೊಗ್ಗ: ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನ ಮಠದ ವತಿಯಿಂದ ಭಕ್ತರ ಸಹಕಾರದೊಂದಿಗೆ ಪ್ರಚಲಿತ ವಿದ್ಯಮಾನಗಳ ವಚನಾಧಾರಿತ ಚಿಂತನೆ ಎಂಬ ಧೈಯ ವಾಕ್ಯದೊಂದಿಗೆ ಶರಣರ ಮೌಲಿಕ ಚಿಂತನೆ–ಉಪನ್ಯಾಸ ಮಾಲಿಕೆ ಮನೆ–ಮನಗಳಲ್ಲಿ ಶ್ರಾವಣ ಚಿಂತನ-2022 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರಘರಾಜೇಂದ್ರ ಸ್ವಾಮೀಜಿ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ಜು. 29ರಿಂದ ಆ. 10 ರವರೆಗೆ ಪ್ರತಿ ದಿನ ಸಂಜೆ 6.30 ಕ್ಕೆ ಶಿವಮೊಗ್ಗ ನಗರದ ವಿವಿಧ ಭಕ್ತರ ಮನೆಗಳಲ್ಲಿ ಪ್ರಸ್ತುತ ವಿಷಯಗಳನ್ನು ಆಧರಿಸಿ ನಾಡಿನ ಖ್ಯಾತ ಉಪನ್ಯಾಸಕರಿಂದ ವಚನಾಧಾರಿತ ಚಿಂತನೆ, ವಚನ ಸಂಗೀತ, ಶ್ರೀ ಬೆಕ್ಕಿನಕಲ್ಮಠ ಅಲ್ಲಮರಂಗದಿಂದ ವಚನ ರೂಪಕ, ಸಂವಾದ, ಪೂಜ್ಯರ ಆರ್ಶೀವಚನ ನಡೆಯಲಿದೆ ಎಂದರು.ಜು. 29 ರಂದು ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಭಾಸ್ಕರ್ ಜಿ. ಕಾಮತ್ ಕುಟುಂಬದವರಿಂದ ಶಂಕರ್ ಮಠ ರಸ್ತೆಯಲ್ಲಿನ ಓಂ ಗಣೇಶ್ ಟ್ರಾಕ್ಟರ್ಸ್ ಶೋರೂಂ ಆವರಣದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್. ಪ್ರಮುಖ ಪಟ್ಟಾಭಿರಾಮ್, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಎರಡನೇ ದಿನದ ಕಾರ್ಯಕ್ರಮ ಜು. 30 ರಂದು ಪಾಲಿಕೆ ಸದಸ್ಯ ಇ. ವಿಶ್ವಾಸ್ ಎಲ್.ಬಿ.ಎಸ್. ಬಡಾವಣೆಯಲ್ಲಿ ಬಡಾವಣೆಯಲ್ಲಿ ಆಯೋಜಿಸಿದ್ದು, ಶಾಸಕರಾದ ಕೆ.ಎಸ್. ಈಶ್ವರಪ್ಪ, ಎಸ್. ರುದ್ರೇಗೌಡ, ಹಾಸ್ಯ ಭಾಷಣಕಾರರಾದ ಗಂಗಾವತಿ ಪ್ರಾಣೇಶ್ ಮತ್ತು ಬಸವರಾಜ್ ಮಹಾಮನಿ ಪಾಲ್ಗೊಳ್ಳಲಿದ್ದಾರೆ ಎಂದರು.ಶಿವಮೊಗ್ಗ ನಗರದ ತುಂಗಾ ತೀರದ ಶ್ರೀ ಬೆಕ್ಕಿನ ಕಲ್ಮಠ ಮಲೆನಾಡಿನ ಸರ್ವ ಜನಾಂಗದ ಸೌಹಾರ್ದ ಪೀಠವಾಗಿದೆ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಶರಣರ ಆಶಯಗಳಾದ ಕಾಯಕ ದಾಸೋಹ, ಅನುಭವದ ಮೂಲಕ ಜನಮುಖಿ ಕಾರ್ಯಕ್ರಮಗಳನ್ನು ಕಾಲ ಕಾಲಕ್ಕೆ ಯೋಜನಾ ಬದ್ಧವಾಗಿ ಹಮ್ಮಿಕೊಂಡು ಬದಲಾಗುತ್ತಿದೆ ಎಂದು ಹೇಳಿದರು.ಶಾವಣ ಮಾಸವನ್ನು ಕಳೆದ ನಾಲ್ಕು ದಶಕದಿಂದ ಶರಣರ ವಚನಗಳ ವ್ಯಾಖ್ಯಾನ ಮಾಸವನ್ನಾಗಿ, ವೈವಿಧ್ಯಮಯ ಹಾಗೂ ಅರ್ಥಪೂರ್ಣವಾಗಿ ಶಿವಮೊಗ್ಗ ನಗರದ ಭಕ್ತರ ಮನೆಗಳಲ್ಲಿ ಆಚರಿಸಲಾಗುತ್ತಿದೆ ಎಂದರು.
ಶ್ರಾವಣ ಮಾಸ ಪ್ರಕೃತಿಯ ಕೊಡುಗೆಯಾಗಿದೆ. ಜೀವನೋತ್ಸಾಹ ನೀಡುತ್ತದೆ. ಜಗತ್ತು ಇಂದು ತಲ್ಲಣಗಳಿಗೆ ಒಳಗಾಗಿದೆ. ಮನುಷ್ಯಪ್ರೇಮ ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮೌಲಿಕ ಚಿಂತನೆಗಳ ಅಗತ್ಯವಿದೆ. ಶರಣ ಚಿಂತನೆಗಳು ಪ್ರಸ್ತುತವಾಗುತ್ತವೆ. ಈ ಹಿನ್ನಲೆಯಲ್ಲಿ ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಉದ್ದೇಶದಿಂದ ಶ್ರಾವಣಚಿಂತನ ನಡೆಯುತ್ತದೆ ಎಂದರು.ಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಈ. ವಿಶ್ವಾಸ್, ಓಂ ಗಣೇಶ್ ಟ್ರಾಕ್ಟರ್ಸ್ ನ ಹರ್ಷ ಕಾಮತ್ ಉಪಸ್ಥಿತರಿದ್ದರು.