ಶಿವಮೊಗ್ಗ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆಗೈದ ಆರೋಪಿಗಳ ಕಠಿಣ ಕ್ರಮಕ್ಕೆ ಆಗ್ರಹಿಸಿ ಇಂದು ನಗರದ ಶಿವಪ್ಪನಾಯಕ ವೃತದಲ್ಲಿ ಶಿವಮೊಗ್ಗ ನಗರ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಬೆಳ್ಳಾರೆಯಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಅವರನ್ನು ಮತಾಂಧ ಶಕ್ತಿಗಳು ಬರ್ಬರವಾಗಿ ಹತ್ಯೆ ಮಾಡಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಎಸ್.ಎನ್. ಚನ್ನಬಸಪ್ಪ, ಹಿಂದೂ ಸಮಾಜವನ್ನು ರಕ್ಷಣೆ ಮಾಡುವುದೇ ಕಷ್ಟವಾಗುತ್ತಿದೆ. ಹಿಂದೂಗಳ ಹತ್ಯೆ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.ಹಿಂದೂಗಳ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದೆ. ಕೆಲವು ದುಷ್ಟ ಶಕ್ತಿಗಳು ಅಟ್ಟಹಾಸ ಮೆರೆಯತೊಡಗಿದ್ದಾರೆ. ಸರ್ಕಾರ ಹಿಂದೂಗಳ ಮರಣಗಳನ್ನು ಲೆಕ್ಕಹಾಕಲು ಮಾತ್ರ ಇದೆ. ಹಿಂದೂ ಸಮಾಜದವರು ಮೃತಪಟ್ಟಾಗ ಶ್ರದ್ಧಾಂಜಲಿ ಸಭೆಗಳನ್ನು ಮಾಡಬೇಕಾಗಿ ಬಂದಿರುವುದು ದುರಂತವಾಗಿದೆ ಎಂದರು.ಎಲ್ಲ ಹಿಂದೂಗಳಿಗೂ ರಕ್ಷಣೆ ಬೇಕೇ ಬೇಕು. ಇಲ್ಲದಿದ್ದರೆ ಅವರೇ ತಮ್ಮ ರಕ್ಷಣೆ ಮಾಡಿಕೊಳ್ಳುವ ಕಾಲ ದೂರವಿಲ್ಲ. ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯವಹಿಸಬಾರದು. ನನಗೆ ತುಂಬಾ ನೋವಾಗುತ್ತದೆ ಎಂದು ಭಾವುಕರಾಗಿ ಕಣ್ಣೀರಿಟ್ಟರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್ ಮಾತನಾಡಿ, ಭಾರತದಲ್ಲಿ ಹಿಂದೂ ಮುಸ್ಲಿಂ ಎಲ್ಲರಿಗೂ ರಕ್ಷಣೆ ಬೇಕಾಗಿದೆ. ಈಗಿರುವ ವಿಫಲತೆಯನ್ನು ಸರಿಪಡಿಸಬೇಕಾಗಿದೆ. ಸರ್ಕಾರ ಮೆಚ್ಚಿಸಲು ಹಿಂದೂ ಸಂಘಟನೆ ಅಸ್ತಿತ್ವಕ್ಕೆ ಬಂದಿಲ್ಲ. ಹಿಂದೂ ಸಂಘಟನೆಯ ಕೆಲವರು ಸರ್ಕಾರದ ಭಾಗವಾಗಿದ್ದಾರೆ ಅಷ್ಟೇ. ಹಿಂದೂಗಳ ರಕ್ಷಣೆ ಮಾಡಬೇಕಾದವರು ಯೋಚನೆ ಮಾಡಬಾರದು. ಸರ್ಕಾರ ಅಗತ್ಯಕ್ರಮ ತೆಗೆದುಕೊಳ್ಳಬೇಕು ಎಂದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ನಗರ ಬಿಜೆಪಿ ಅಧ್ಯಕ್ಷ ಜಗದೀಶ್ ಎನ್.ಕೆ., ಎಸ್. ದತ್ತಾತ್ರಿ, ಕೆ.ಈ. ಕಾಂತೇಶ್, ರಮೇಶ್(ರಾಮು) ಜಿಲ್ಹಾ ಕಾರ್ಯದರ್ಶಿ ಹೃಷಿಕೇಶ್ ಪೈ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ  ಎಂ.ಬಿ. ಹರಿಕೃಷ್ಣ, ಸಂತೋಷ್ ಬಳ್ಳೆಕೆರೆ, ಮೋಹನ್ ರೆಡ್ಡಿ, ಆರ್.ವಿ. ದರ್ಶನ್, ಉಪ ಮೇಯರ್ ಶಂಕರ್ ಗನ್ನಿ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…