ಶಿವಮೊಗ್ಗ: ಉಪವಿಭಾಗಾಧಿಕಾರಿಗಳಿಗೆ ಜನನ ಮತ್ತು ಮರಣ ಪತ್ರ ಕೊಡುವ ಅಧಿಕಾರ ನೀಡಿರುವುದನ್ನು ವಿರೋಧಿಸಿ ಶಿವಮೊಗ್ಗ ವಕೀಲರ ಸಂಘದಿಂದ ಇಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಜನನ ಮತ್ತು ಮರಣ ನೋಂದಣಿ ವಿಳಂಬದ ಸಂದರ್ಭದಲ್ಲಿ ಮತ್ತು ತಿದ್ದುಪಡಿಯ ಅವಶ್ಯಕತೆ ಇದ್ದಲ್ಲಿ ವ್ಯಕ್ತಿಗಳು ಜೆ.ಎಂ.ಎಸ್.ಸಿ. ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತಿದ್ದರು. ನ್ಯಾಯಾಲಯದ ಆದೇಶದ ನಂತರ ಸಂಬಂಧಪಟ್ಟ ಪ್ರಾಧಿಕಾರಗಳು ಈ ಜನನ ಮತ್ತು ಮರಣ ಪತ್ರವನ್ನು ನೀಡುತ್ತಿದ್ದವು. ಆದರೆ, ಈಗ ಜೆ.ಎಂ.ಎಫ್.ಸಿ. ನ್ಯಾಯಾಲಯದ ಅಧಿಕಾರ ತೆಗೆದು ಉಪ ವಿಭಾಗಾಧಿಕಾರಿಗಳ ನ್ಯಾಯಾಂಗಕ್ಕೆ ನೀಡಲಾಗಿದೆ. ಇದು ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಮಧ್ಯವರ್ತಿಗಳು ಹುಟ್ಟಿಕೊಳ್ಳುತ್ತಾರೆ. ಅಲ್ಲದೇ, ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ ಸುಮಾರು 130 ಕಿ.ಮೀ. ದೂರದಲ್ಲಿರುತ್ತದೆ. ಕಕ್ಷಿದಾರರು ಎಸಿ ಕಚೇರಿಗೆ ಬರುವುದು ಕಷ್ಟವಾಗುತ್ತದೆ.
ಕೆಲಸದ ಒತ್ತಡದ ಸಂದರ್ಭದಲ್ಲಿ ಎಸಿ ನ್ಯಾಯಾಲಯದ ಆದೇಶಗಳು ವಿಳಂಬವಾಗುತ್ತದೆ ಎಂದು ವಕೀಲರು ತಿಳಿಸಿದ್ದಾರೆ.ಈ ಎಲ್ಲಾ ಸಮಸ್ಯೆಗಳ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಜನನ, ಮರಣ ಪತ್ರಗಳಿಗೆ ಸಂಬಂಧಿಸಿದಂತೆ ಎಸಿ ನ್ಯಾಯಾಲಯಕ್ಕೆ ನೀಡಿರುವ ಅಧಿಕಾರವನ್ನು ವಾಪಸ್ ಪಡೆದು ಈ ಹಿಂದಿನಂತೆ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಮುಂದುವರೆಸುವಂತೆ ವಕೀಲರ ಸಂಘ ಮನವಿಯಲ್ಲಿ ಆಗ್ರಹಿಸಿದೆ.ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಿ.ಜಿ. ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಕೆ. ಅಣ್ಣಪ್ಪ, ಖಜಾಂಚಿ ಗಿರೀಶ್ ಎಸ್. ಜಾಧವ್, ಉಪಾಧ್ಯಕ್ಷೆ ವಿದ್ಯಾರಾಣಿ, ಪದಾಧಿಕಾರಿಗಳಾದ ಟಿ.ಎಸ್. ಟೀಕೋಜಿರಾವ್, ಮಂಜು, ಜಿ. ಅಶೋಕ್, ಚಂದ್ರಕುಮಾರ್, ಮಹೇಂದ್ರಕುಮಾರ್ ಮುಂತಾದವರಿದ್ದರು.