ಶಿವಮೊಗ್ಗ: ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅಸಮರ್ಥರಾದ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಯುವಕರ ಹತ್ಯೆ ಹಿಂದೆ ಕಾಣದ ಕೈಗಳಿವೆ. ಯುವಕರಿಗೆ ಪ್ರಚೋದನಕಾರಿ ಭಾಷಣಗಳ ಮೂಲಕ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ. ಅಧಿಕಾರದಲ್ಲಿರುವ ಸಚಿವರು, ಸಂಸದರು ಯುವಕರಲ್ಲಿ ಕೋಮುವಾದದ ಬೀಜಗಳನ್ನು ಬಿತ್ತುತ್ತಿದ್ದಾರೆ. ಇದರಿಂದ ಅನೇಕ ಅಮಾಯಕ ಯುವಕರು ತಮ್ಮ ಜೀವನ ಕಳೆದುಕೊಳ್ಳುತ್ತಿದ್ದಾರೆ. ಈಗಾಗಲೇ ಇದಕ್ಕೆ ಸಾಕಷ್ಟು ನಿದರ್ಶನಗಳು ಕೂಡ ದೊರೆತಿದೆ. ಆದರೂ ಬಂಡ ಬಿಜೆಪಿ ಸರ್ಕಾರ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಸಹ ತಮ್ಮದೇ ಪಕ್ಷದ ಕಾರ್ಯಕರ್ತನನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ಇನ್ನು ಯಾವ ರೀತಿಯಲ್ಲಿ ಸಮಾಜವನ್ನು ರಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಯುವಕರ ಹತ್ಯೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರಾಜೀನಾಮೆ ನೀಡುವುದಾಗಿ ಅವರ ಪಕ್ಷದ ಶಾಸಕರೇ ಹೇಳಿಕೆ ನೀಡಿದ್ದಾರೆ. ಇನ್ನೂ ಕಾರ್ಯಕರ್ತರು ಸಾಮೂಹಿಕವಾಗಿ ರಾಜಿನಾಮೆ ನೀಡುತ್ತಿರುವುದಕ್ಕಿಂತ ನಾಚಿಕೆಗೇಡಿನ ವಿಷಯ ಮತ್ತೊಂದಿಲ್ಲ. ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಜವಾಬ್ದಾರಿಯನ್ನು ನಿಭಾಯಿಸಲು ಅಸಮರ್ಥರಾಗಿದ್ದಾರೆ ಎಂಬುವುದು ಮತ್ತೆ-ಮತ್ತೆ ಸಾಬೀತು ಪಡಿಸುತ್ತಿದ್ದಾರೆ. ಮತ್ತಷ್ಟು ಯುವಕರ ಹತ್ಯೆ ಆಗುವುದಕ್ಕೂ ಮೊದಲು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.ರಾಜ್ಯದಲ್ಲಿ ನಡೆಯುತ್ತಿರುವ ಯುವಕರ ಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ನಿಷ್ಪಕ್ಷಪಾತವಾಗಿ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಯುವ ಕಾಂಗ್ರೆಸ್ ನಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.