ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಇದೇ ಮೊದಲ ಬಾರಿಗೆ ಎನ್.ಯು. ಆಸ್ಪತ್ರೆಯಲ್ಲಿ ಅಪರೂಪದ ಕಿಡ್ನಿ ಕಸಿ ಚಿಕಿತ್ಸೆಯ ಯಶಸ್ವಿ ಪ್ರಯೋಗವಾಗಿದೆ ಎಂದು ಎನ್.ಯು. ಆಸ್ಪತ್ರೆಯ ಮೂತ್ರಶಾಸ್ತ್ರ ತಜ್ಞ ಡಾ. ಪ್ರದೀಪ್ ಹೇಳಿದರು.

ಅವರು ಇಂದು ಮಾಚೇನಹಳ್ಳಿಯಲ್ಲಿರುವ ಎನ್.ಯು. ಆಸ್ಪತ್ರೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದುವರೆಗೂ ಮೂತ್ರಪಿಂಡ ಕಸಿ ಒಂದೇ ರಕ್ತದ ಗುಂಪುಗಳಲ್ಲಿ ಮಾತ್ರ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ರಕ್ತದ ಗುಂಪುಗಳು ಹೊಂದಾಣಿಕೆಯಾಗದಿದ್ದರೂ ವಿಶೇಷ ಚಿಕಿತ್ಸೆಗಳ ಮೂಲಕ ಮೂತ್ರಪಿಂಡ ಕಸಿ ಪ್ರಯೋಗ ಮಾಡಲಾಗಿದೆ, ಇದು ನಮ್ಮ ಆಸ್ಪತ್ರೆಯ ಹೆಮ್ಮೆಯಾಗಿದೆ ಎಂದರು.ಬೀರೂರಿನ ಗಿರೀಶ್ ಎಂಬುವವರಿಗೆ ಮೂತ್ರಪಿಂಡ ಕಸಿ ಆಗಬೇಕಿತ್ತು. ಆದರೆ, ದಾನಿಗಳು ಸಿಕ್ಕಿರಲಿಲ್ಲ. ಅವರ ಪತ್ನಿಯೇ ಕಿಡ್ನಿ ದಾನ ಮಾಡಲು ಸಿದ್ಧರಾಗಿದ್ದರು. ರೋಗಿಯ ರಕ್ತ ಬಿ ಪಾಸಿಟಿವ್ ಇತ್ತು. ಪತ್ನಿಯ ರಕ್ತದ ಗುಂಪು ಎ ಪಾಸಿಟಿವ್ ಇತ್ತು. ಹಾಗಾಗಿ ಕಸಿ ಮಾಡುವುದು ಕಷ್ಟವಾಗಿತ್ತು. ಆದರೆ, ನಮ್ಮ ಆಸ್ಪತ್ರೆಯಲ್ಲಿ ಅವರು ದಾಖಲಾದಾಗ ಮೂತ್ರಪಿಂಡವನ್ನು ರಕ್ಷಿಸುವ ಔಷಧಿಗಳ ಮೂಲಕ(ಪ್ಲಾಸ್ಮಾಫೆರೆಸಿಸ್ ವಿಧಾನ) ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಅವರ ಪತ್ನಿ ಹರ್ಷಿತಾ ಕೂಡ ಕಿಡ್ನಿ ದಾನ ಮಾಡಿದ್ದರೂ ಆರೋಗ್ಯವಾಗಿದ್ದಾರೆ. ಹಾಗಾಗಿ ಇದೊಂದು ಅಪರೂಪದ ಕಿಡ್ನಿ ಕಸಿ ಚಿಕಿತ್ಸೆಯ ಯಶಸ್ವಿ ಪ್ರಯೋಗವಾಗಿದೆ. ಇದಲ್ಲದೇ, ನಮ್ಮ ಆಸ್ಪತ್ರೆಯಲ್ಲಿ ಸುಮಾರು 5 ಕ್ಕೂ ಹೆಚ್ಚು ಮೂತ್ರಪಿಂಡ ಜೋಡಣೆ ಮಾಡಲಾಗಿದೆ ಎಂದರು.

ಡಾ. ಪ್ರವೀಣ್ ಮಾಳವಧೆ ಮಾತನಾಡಿ, ಮಾಚೇನಹಳ್ಳಿಯಲ್ಲಿರುವ ಎನ್.ಯು. ಆಸ್ಪತ್ರೆ ಅತ್ಯಂತ ಸುಸಜ್ಜಿತವಾಗಿದೆ. ರೋಗಿಗಳ ಭರವಸೆಯ ಬೆಳಕಾಗಿದೆ. ದೀರ್ಘಕಾಲದಿಂದ ಮೂತ್ರ ಕೋಶದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಇತ್ತೀಚಿನ ಆಧುನಿಕ ತಂತ್ರಜ್ಞಾನದ ಮೂಲಕ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲದೇ, ಅಕ್ಕಪಕ್ಕದ ಜಿಲ್ಲೆಗಳಿಂದಲೂ ಇಲ್ಲಿಗೆ ರೋಗಿಗಳು ಬರುತ್ತಾರೆ. ನಾವು ಆತ್ಮ ವಿಶ್ವಾಸದಿಂದ ಅವರಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಪರಿಣಿತ ತಜ್ಞರು, ಆಧುನಿಕ ಉಪಕರಣಗಳು, ಉತ್ತಮ ಸಿಬ್ಬಂದಿ ಇಲ್ಲಿದ್ದಾರೆ ಎಂದರು.ಮೂತ್ರಪಿಂಡದ ಕಲ್ಲುಗಳು, ಮೂತ್ರನಾಳದ ಸೋಂಕು, ಮೂತ್ರಪಿಂಡ ಕಸಿ, ವೈಫಲ್ಯ ಸೇರಿದಂತೆ ಅನೇಕ ರೀತಿಯ ಚಿಕಿತ್ಸೆಗಳನ್ನು ನಮ್ಮ ಆಸ್ಪತ್ರೆಯಲ್ಲಿ ಮಾಡಲಾಗುತ್ತದೆ. ಡಯಾಲಿಸಿಸ್ ಗೆ ಒಳಗಾಗುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತದೆ. ಅಷ್ಟೇ ಅಲ್ಲ, ಕೈಗೆಟುಕುವ ದರದಲ್ಲಿ ರೊಬೊಟಿಕ್ ಶಸ್ತ್ರಚಿಕಿತ್ಸೆ ಸೇರಿದಂತೆ ವಿಶ್ವದರ್ಜೆಯ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಡಾ. ಕಾರ್ತಿಕ್, ಪಿ.ಆರ್.ಒ. ಶ್ರುತಿ ರಾವ್ ಇದ್ದರು.

ವರದಿ ಮಂಜುನಾಥ್ ಶೆಟ್ಟಿ…