ಶಿವಮೊಗ್ಗ: ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳನ್ನು ಬಂಧಿಸಿ ಮೃತನ ಕುಟುಂಬಕ್ಕೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಶ್ರೀ ನಾರಾಯಣಗುರು ವಿಚಾರ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕು ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಅಮಾನುಷವಾಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆಗೈದಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು.ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂದು ವಿಶ್ವಮಾನವ ಸಂದೇಶವನ್ನು ಇಡೀ ಮಾನವಕುಲಕ್ಕೆ ಸಾರಿದ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಸಿದ್ಧಾಂತವನ್ನು ಪ್ರತಿಯೊಬ್ಬರು ಅಗತ್ಯವಾಗಿ ಪಾಲಿಸಬೇಕಾಗಿರುವ ಸಂದರ್ಭದಲ್ಲಿ ಕೆಲವು ಸಮಾಜಘಾತುಕ ದುಷ್ಟಶಕ್ತಿಗಳು ಅರಾಜಕತೆ ಸೃಷ್ಠಿ ಮಾಡುವುದರ ಜೊತೆಗೆ ಸಮಾಜದಲ್ಲಿ ಸಾರ್ವಜನಿಕರು ನೆಮ್ಮದಿಯಿಂದ ಬದುಕಲು ಬಿಡದೇ ಅಶಾಂತಿ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ದುಷ್ಟ ಶಕ್ತಿಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಹಾಗೂ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ಸರ್ಕಾರಿ ನೌಕರಿ ನೀಡುವುದರ ಜೊತೆಗೆ 1 ಕೋಟಿ ರೂ. ಪರಿಹಾರವನ್ನು ಅವರ ಕುಟುಂಬಕ್ಕೆ ಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಪ್ರಮುಖರಾದ ಪ್ರವೀಣ್ ಹಿರೇಇಡಗೋಡು, ಉಮೇಶ್ ಕೆ.ಎಲ್., ಲಿಂಗೇಶ್ ಕೆ.ಪಿ., ವಿಕಾಸ್ ಕುನ್ನೂರು, ಹೊದಲ ಶಿವಕುಮಾರ್, ವೀರಭದ್ರಪ್ಪ ಇಂಡವಳ್ಳಿ, ಸಂದೇಶ್ ನಾಯಕ್, ಮೋಹನ್ ಸಿಂಧುವಾಡಿ, ಹರಿಯಪ್ಪ ನಾಯಕ್, ಸುಧಾಕರ್. ಕೇಶವಮೂರ್ತಿ, ಎಂ.ಕೆ. ರಮೇಶ್, ನಟರಾಜ್, ಶಿವಪ್ಪ, ಗಣಪತಿ, ವಸಂತ ಪೂಜಾರಿ, ಅಖಿಲೇಶ್, ಗಣೇಶ್, ಲಿಂಗರಾಜ್ ಎಸ್.ಎನ್. ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…