ಶಿವಮೊಗ್ಗ : ರೇಷ್ಮೆ ಇಲಾಖೆ ಸೇರಿದಂತೆ ಬಾಗಿಲು ಮುಚ್ಚಿರುವ ಸರ್ಕಾರಿ ಕಟ್ಟಡಗಳ ನಿರ್ವಹಣೆ ಹಾಗೂ ಅಲ್ಲಿನ ಸ್ವತ್ತುಗಳ ರಕ್ಷಣೆ ಬಗ್ಗೆ ಗಮನ ಹರಿಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಎಸ್. ನಾರಾಯಣ ಗೌಡ ಅಧ್ಯಕ್ಷತೆಯಲ್ಲಿ ಶನಿವಾರ ಜಿಪಂ ಸಭಾಂಗಣದಲ್ಲಿ ನಡೆದ ತ್ರೆಮಾಸಿಕ ಕೆಡಿಪಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಗರದ ಎಪಿಎಂಸಿ ಎದುರು ಹಾಗೂ ಗಾಜನೂರಿನಲ್ಲಿರುವ ರೇಷ್ಮೆ ಇಲಾಖೆ ಕಟ್ಟಡಗಳು ಕಾರ್ಯನಿರ್ವಹಿಸುತ್ತಿಲ್ಲ. ಈ ಕಟ್ಟಡಗಳ ಕಿಟಕಿ, ಬಾಗಿಲು ಕಳುವಾಗುತ್ತಿರುವ ಬಗ್ಗೆ ಮಾಹಿತಿ ಇದೆ ಇವುಗಳ ಕಡೆ ಗಮನ ನೀಡುವಂತೆ ಹೇಳಿದರು.ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಸಾಕಷ್ಟು ಸರ್ಕಾರಿ ಕಚೇರಿಗಳು ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿವೆ. ಇದರಿಂದ ಸರ್ಕಾರಕ್ಕೆ ಬಾಡಿಗೆಯ ಹೊರೆಯೂ ಆಗುತ್ತಿದೆ. ಆದರೆ ರೇಷ್ಮೆ ಇಲಾಖೆ ಸೇರಿದಂತೆ ಇತರೆ ಇಲಾಖೆ ಕಟ್ಟಡಗಳು ಬಾಗಿಲು ಮುಚ್ಚಿ ಹಾಳಾಗುತ್ತಿವೆ.ಇಂತಹ ಕಟ್ಟಡಗಳಿಗೆ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸಿ ನಿರ್ವಹಣೆ ಮಾಡುವಂತೆ ಸಲಹೆ ನೀಡಿದರು.

ಜಲಜೀವನ್ ಮಿಷನ್ ಯೋಜನೆಯಡಿ ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಂಪರ್ಕ ನೀಡಲಾಗುತ್ತಿದೆ. ಇದು ಕೋಟ್ಯಂತರ ರೂ. ವೆಚ್ಚದ ಕಾಮಗಾರಿಯಾಗಿದ್ದು , ಹೆಚ್ಚಿನ ಗ್ರಾಮಗಳಲ್ಲಿ ಸರಿಯಾಗಿ ಕೆಲಸ ಆಗುತ್ತಿಲ್ಲ. ಗುಣಮಟ್ಟದ ಪೈಪ್‌ಗಳನ್ನು ಅಳವಡಿಸುತ್ತಿಲ್ಲ ಎಂಬ ದೂರಿದೆ. ಇದನ್ನು ಸಮರ್ಪಕವಾಗಿ ಮಾಡಲು ಕ್ರಮ ಕೈಗೊಳ್ಳಬೇಕು. ಸರ್ಕಾರದ ಕೋಟ್ಯಂತರ ರೂ. ವೆಚ್ಚದ ಕಾಮಗಾರಿ ಜನೋಪಯೋಗಿ ಆಗಬೇಕೆಂದು ಸಚಿವ ಆರಗ ಜ್ಞಾನೇಂದ್ರ ಸೂಚಿಸಿದರು.ಇದಕ್ಕೆ ಪೂರಕವಾಗಿ ಮತನಾಡಿದ ಶಾಸಕ ಕುಮಾರ ಬಂಗಾರಪ್ಪ, ಜೆಜೆಎಂ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳನ್ನು ಅಗೆದು ಹಾಗೆಯ ಬಿಡಲಾಗುತ್ತಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಶಿವಮೊಗ್ಗ-ಭದ್ರಾವತಿ ರಾಷ್ಟಿçÃಯ ಹೆದ್ದಾರಿ ಸರಿಯಾಗಿ ನಿರ್ವಹಣೆಯಾಗಿತ್ತಿಲ್ಲ. ವಾಹನ ಸವಾರರು ತೀವ್ರ ಪರದಾಡುವ ಸ್ಥಿತಿ ಇದೆ. ಹೆದ್ದಾರಿ ಪಕ್ಕ ಸ್ವಚ್ಛತೆ, ಚರಂಡಿ ದುರಸ್ತಿಯಾಗುತ್ತಿಲ್ಲ. ಈ ಸಂಬAಧ ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಹೆಚ್ಚಾರಿ ಪ್ರಾಧಿಕಾರದ ಇಂಜಿನಿಯರ್‌ಗೆ ಸೂಚಿಸಿದರು.ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ಅಳವಡಿಸಿರುವ ಹಂಪ್‌ಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಆರಗ ಜ್ಞಾನೇಂದ್ರ, ಶಾಸಕರಾದ ಕುಮಾರ್ ಬಂಗಾರಪ್ಪ, ಕೆ.ಬಿ. ಅಶೋಕ್‌ನಾಯ್ಕ್, ಎಸ್. ರುದ್ರೇಗೌಡ ಇಂತಹ ಹಂಪ್‌ಗಳನ್ನು ತ್ವರಿತವಾಗಿ ತೆಗೆಯಬೇಕು. ಕೂಡು ರಸ್ತೆಗಳಲ್ಲಿ ಮಾತ್ರ ಹಂಪ್ ಹಾಕಬೇಕು. ಸುಪ್ರೀಂ ಕೋರ್ಟ್ ನಿಯಮ ಪಾಲನೆ ಮಾಡುವಂತೆ ಒತ್ತಾಯಿಸಿದರು.

ವೈಜ್ಞಾನಿಕವಾಗಿ ರಸ್ತೆ, ಚರಂಡಿಗಳನ್ನು ನಿರ್ಮಿಸದ ಇಂಜಿನಿಯರ್‌ಗಳ ಬಗ್ಗೆ ಹರಿಹಾಯ್ದ ಆರಗ ಜ್ಞಾನೇಂದ್ರ ಯಾವೊಂದು ರಸ್ತೆಗಳನ್ನು ಸರಿಯಾಗಿ ಮಾಡುತ್ತಿಲ್ಲ. ಇಂತಹ ಇಂಜಿನಿಯರ್‌ಗಳ ಪದವಿ ಪ್ರಮಾಣ ಪತ್ರಗಳನ್ನು ಪರಿಶೀಲಿಸಬೇಕಿದೆ. ಸರಿಯಾಗಿ ಕೆಲಸ ಮಾಡದಿರುವ ಇಂತಹ ಇಂಜಿನಿಯರ್‌ಗಳ ಪದವಿ ಬಗ್ಗೆಯೇ ಅನುಮಾನ ಬರುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಭೆಯಲ್ಲಿ ಉಸ್ತುವಾರಿ ಸಚಿವ ನಾರಾಯಣಗೌಡ, ಶಾಸಕ ಡಿ.ಎಸ್. ಅರುಣ್, ಜಿಲ್ಲಾಧಿಕಾರಿ ಡಾ. ಅರ್.ಸೆಲ್ವಮಣಿ, ಜಿಪಂ ಸಿಇಓ ಎಂ.ಎಲ್. ವೈಶಾಲಿ, ಎಸ್ಪಿ ಲಕ್ಷ್ಮಿ ಪ್ರಸಾದ್ ಹಾಗೂ ಅಧಿಕಾರಿಗಳು ಇದ್ದರು.

ವರದಿ ಮಂಜುನಾಥ್ ಶೆಟ್ಟಿ…