ಶಿವಮೊಗ್ಗ: ಭಾರೀ ಮಳೆ ಕಾರಣ ನಗರದಲ್ಲಿ ಅಪಾರ ಹಾನಿ ಸಂಭವಿಸಿದೆ. ಶೇಷಾದ್ರಿಪುರಂ ಎರಡನೇ ತಿರುವಿನಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯೆ ರಂಗಮ್ಮ ಹನುಮಂತಪ್ಪ ಅವರ ಮನೆ ಕುಸಿದು ಬಿದ್ದಿದ್ದು ಊಟಕ್ಕೆ ಕುಳಿತುಕೊಂಡಿದ್ದ ಅವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.ಅದೇ ಬೀದಿಯಲ್ಲಿ ರಂಗಪ್ಪ ಮತ್ತು ಕುಟುಂಬದವರ ಮೂರು ಮನೆಗಳು ಭಾಗಶಃ ಹಾನಿಯಾಗಿವೆ. ಸ್ಥಳೀಯ ಪಾಲಿಕೆ ಸದಸ್ಯ ಹೆಚ್.ಸಿ. ಯೋಗೀಶ್ ಅವರ ಮಾಹಿತಿಯಂತೆ ಮೇ 19 ರಂದು ಸುರಿದ ಭಾರಿ ಮನೆಗಳಿಗೆ ಹಾನಿಗೊಳಗಾದ ಮನೆಗಳಿಗೆ ಇನ್ನೂ ಪರಿಹಾರ ಬಂದಿಲ್ಲ ಎಂದರು.

ತಾತ್ಕಾಲಿಕ ವ್ಯವಸ್ಥೆಯನ್ನು ಸರ್ಕಾರದಿಂದ ನೀಡಿಲ್ಲ. ನಮ್ಮ  ವಾರ್ಡ್ ನಲ್ಲಿ ಒಟ್ಟು 30 ಮನೆಗಳು ಬಿದ್ದಿವೆ. ಕೊರೋನಾ ಸಂದರ್ಭದಲ್ಲಿ ಪರಿಹಾರ ನೀಡಿದ ಶೇಷಾದ್ರಿಪುರಂ ರೈಲ್ವೇ ಹಳಿ ಬಳಿಯ ಮನೆ ಕೂಡ ಸಂಪೂರ್ಣ ಕುಸಿದಿದ್ದು, ಅಧಿಕಾರಿಗಳು ಇದುವರೆಗೂ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಾಪೂಜಿನಗರ ಮತ್ತು ಟ್ಯಾಂಕ್ ಮೊಹಲ್ಲಾದಲ್ಲಿ ನಿನ್ನೆ ರಾತ್ರಿ ಒಟ್ಟು ಎರಡು ಮನೆಗಳು ಕುಸಿದು ಬಿದ್ದಿವೆ. ಮನೆಯಲ್ಲಿದ್ದ ಮೆಕಾನಿಕ್ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನ್ಯೂ ಮಂಡ್ಲಿ, ಹಳೆ ಮಂಡ್ಲಿ ಮುಂತಾದ ಕಡೆ ಕೂಡ ಮನೆಗಳು ಬಿದ್ದ ವರದಿಯಾಗಿದೆ.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಹಾಗೂ ತಹಶೀಲ್ದಾರ್ ನಾಗರಾಜ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರ್ಕಾರದಿಂದ ಪರಿಹಾರದ ಭರವಸೆ ನೀಡಿದ್ದಾರೆ. ಸ್ಥಳಕ್ಕೆ ಜಿಪಂ ಮಾಜಿ ಸದಸ್ಯ ಕೆ.ಇ. ಕಾಂತೇಶ್, ಸುರೇಖಾ ಮುರಳೀಧರ್ ಕೂಡ ಭೇಟಿ ನೀಡಿ ಸಂತ್ರಸ್ಥರಿಗೆ ನೆರವಿನ ಭರವಸೆ ನೀಡಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…