ಶಿವಮೊಗ್ಗ: ಪಂಚಮಸಾಲಿ ಸಮಾಜವನ್ನು 2 ಎ ಗೆ ಸೇರಿಸಬೇಕೆಂದು ಒತ್ತಾಯಿಸಿ ಆಗಸ್ಟ್ 24 ರಂದು ಶಿವಮೊಗ್ಗದಲ್ಲಿ ಶಿವಪ್ಪನಾಯಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ರ್ಯಾಲಿ ನಡೆಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮೂಲಕ ಸರ್ಕಾರಕ್ಕೆ ಜ್ಞಾಪಕಪತ್ರ ಸಲ್ಲಿಸಲಾಗುವುದು ಎಂದು ಅಖಿಲ ಭಾರತ ಲಿಂಗಾಯಿತ ಪಂಚಮಸಾಲಿ ಸಮಾಜ ಕೂಡಲಸಂಗಮ ಪೀಠದ ಜಗದ್ಗುರು ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಇಂದು ಮೀಡಿಯಾ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಕೂಡಲ ಸಂಗಮ ಪಂಚಮಸಾಲಿ ಪೀಠದಿಂದ ರಾಜ್ಯಾದ್ಯಂತ ನಿರಂತರವಾಗಿ ಲಿಂಗಾಯಿತ ಪಂಚಮಸಾಲಿ, ಮಲೆಗೌಡ ಲಿಂಗಾಯತ ಸಮುದಾಯವನ್ನು ರಾಜ್ಯಸರ್ಕಾರದ 2 ಎ ಮೀಸಲಾತಿಗೆ ಒಳಪಡಿಸಬೇಕು. ಹಾಗೂ ಎಲ್ಲಾ ಲಿಂಗಾಯತ ಸಮಾಜವನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ಹಕ್ಕೊತ್ತಾಯದಿಂದ ಮೀಸಲಾತಿ ಚಳವಳಿ ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದರು.ಈಗಾಗಲೇ 10 ಲಕ್ಷ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಿ ನಿರಂತರ ಪಾದಯಾತ್ರೆ ಮೂಲಕ ಹಕ್ಕೊತ್ತಾಯ ಮಾಡುವುದು, ರಾಜ್ಯದಾದ್ಯಂತ ಹರಿದು ಹಂಚಿ ಹೋಗಿರುವ ಪಂಚಮಸಾಲಿ ಸಮುದಾಯವನ್ನು ಒಗ್ಗೂಡಿಸುವುದು, ಇದರೆಲ್ಲದರ ನಡುವೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಗೆ ಹೋರಾಟ ನಡೆಸಲಾಗುತ್ತಿದೆ ಎಂದರು.ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಸೆಪ್ಟೆಂಬರ್ 21, 2021 ರಲ್ಲಿ ಮೀಸಲಾತಿ ನೀಡುವ ಭರವಸೆ ನೀಡಿದ್ದರು.

ಅವರು ಅಧಿಕಾರ ತ್ಯಾಗ ಮಾಡಿದ ಮೇಲೆ ಬಸವರಾಜ ಬೊಮ್ಮಾಯಿ ಸರ್ಕಾರ ಕೂಡ 3 ಬಾರಿ ಭರವಸೆ ನೀಡಿ ವಿಫಲವಾಗಿದೆ. ಕೊನೆಗೆ ಅನಿವಾರ್ಯವಾಗಿ ಮುಖ್ಯಮಂತ್ರಿಗಳ ಮನೆ ಮುಂಭಾಗ ಧರಣಿ ಕೂರುವ ತೀರ್ಮಾನ ಮಾಡಿದಾಗ ಸಂಧಾನ ಸಭೆ ನಡೆಸಿ ಎರಡು ತಿಂಗಳ ಕಾಲಾವಕಾಶ ಕೇಳಿದ್ದಲ್ಲದೇ, ಆಯೋಗ ರಚಿಸಿ ಸಮೀಕ್ಷೆಗೆ ತೀರ್ಮಾನ ಮಾಡಲಾಗಿತ್ತು. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಸಮೀಕ್ಷೆ ನಡೆದಿದ್ದು, ಇನ್ನೂ ವರದಿ ಬಂದಿಲ್ಲ ಎಂದರು.ವರದಿ ಬರುವ ಮುನ್ನ ಸರ್ಕಾರಕ್ಕೆ ಎಚ್ಚರಿಸುವ ನಿಟ್ಟಿನಲ್ಲಿ ವಿವಿಧ ಜಿಲ್ಲೆಗಳಲ್ಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನ ಹಾಗೂ ಜಾಗೃತಿ ಸಭೆಗಳ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಕಾರ್ಯ ನಡೆಸಲಾಗುವುದು. ಅಭಿಯಾನದ ವೇಳಾಪಟ್ಟಿಯಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಆ. 16 ರಂದು ಸಾಗರ, ಆ. 17 ರಂದು ಸೊರಬ, ಆ. 18 ರಂದು ಹೊಸನಗರ, 19 ರಂದು ತೀರ್ಥಹಳ್ಳಿ, 20 ರಂದು ಶಿಕಾರಿಪುರ, 21 ರಂದು ಭದ್ರಾವತಿ, 23 ರಂದು ಶಿವಮೊಗ್ಗ ನಗರದಲ್ಲಿ ಜಾಗೃತಿ ಸಭೆ ನಡೆಯಲಿದೆ. ಆ. 24 ರಂದು ಶಿವಮೊಗ್ಗದಲ್ಲಿ ರ್ಯಾಲಿ ನಡೆಸಲಾಗುವುದು. ಜಿಲ್ಲೆಯ ಎಲ್ಲಾ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹೇಳಿದರು.

ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ. ಮೀಸಲಾತಿ ಘೋಷಣೆ ಮಾಡುವ ವಿಶ್ವಾಸವಿದೆ. ದಲಿತರು ನಮಗೆ ಮೀಸಲಾತಿ ನೀಡಲು ಅಪಸ್ವರ ಎತ್ತಿಲ್ಲ. ಬೆಂಬಲ ನೀಡಿದ್ದಾರೆ. ಸಂವಿಧಾನಬದ್ಧವಾಗಿ ಎಲ್ಲಾ ಸಮುದಾಯಗಳು ಮೀಸಲಾತಿ ಕೇಳುವುದರಲ್ಲಿ ತಪ್ಪಿಲ್ಲ ಎಂದು ಸ್ವಾಮೀಜಿ ಹೇಳಿದರು.ಮುಖ್ಯಮಂತ್ರಿಗಳು ನೀಡಿದ ಗಡುವು ಆ. 22 ಕ್ಕೆ ಮುಗಿಯಲಿದ್ದು, ಅಷ್ಟರೊಳಗೆ ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳ ನಿವಾಸದ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ಡಾ. ಮಾಲತೇಶ್, ಪ್ರೊ. ವಿಜಯಕುಮಾರ್, ಮಹಾರುದ್ರಪ್ಪ ಕಣವಿಮನೆ, ಸರಳಾ ಕರಿಬಸಪ್ಪ, ಅರವಿಂದ್ ಸಮನವಳ್ಳಿ, ಉಮೇಶ್ ಸಮನವಳ್ಳಿ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…