ಶಿವಮೊಗ್ಗ: ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ಟೈಪಾಯಿಡ್ ಲಸಿಕೆ ನೀಡುತ್ತಿರುವುದು ಶ್ಲಾಘನೀಯ ಎಂದು ಅಪರ ಜಿಲ್ಲಾಧಿಕಾರಿ ನಾಗೇಂದ್ರ ಹೊನ್ನಳ್ಳಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಸರ್ಜಿ ಪೌಂಡೇಷನ್, ರೌಂಡ್ ಟೇಬಲ್ ಇಂಡಿಯಾ ಶಿವಮೊಗ್ಗ, ಭಾರತ ಸೇವಾದಳ ಶಾಖೆ ಸಂಯುಕ್ತಾಶ್ರಯದೊಂದಿಗೆ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಇಂದು ಬೆಳಗ್ಗೆ ದುರ್ಗಿಗುಡಿ ಸರ್ಕಾರಿ ಆಂಗ್ಲ, ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಹರ್ ಘರ್ ತಿರಂಗಾ ಅರಿವು ಜಾಥಾ ಹಾಗೂ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಗರದ ಸರ್ಕಾರಿ ಶಾಲೆಗಳಲ್ಲಿ ಬಡ ಮಕ್ಕಳೇ ಹೆಚ್ಚಾಗಿ ಓದುತ್ತಿದ್ದು, ಉಚಿತವಾಗಿ ಹಮ್ಮಿಕೊಂಡ ಈ ಶಿಬಿರ ಹೆಚ್ಚು ಉಪಯುಕ್ತವಾಗಿದೆ. ಇದು ನಿಜಕ್ಕೂ ಮಾನವೀಯ ಕಾಳಜಿಗೆ ಸಾಕ್ಷಿಯಾಗಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಲಿ, ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

ಸರ್ಜಿ ಪೌಂಡೇಷನ್ ವ್ಯವಸ್ಥಾಪಕ ನಿರ್ದೇಶಕ ಡಾ.ಧನಂಜಯ ಸರ್ಜಿ ಮಾತನಾಡಿ, ಶಿವಮೊಗ್ಗದಾದ್ಯಂತ  ಹಲವು ದಿನಗಳಿಂದ ಎಡಬಿಡದೇ ಮಳೆ ಸುರಿಯುತ್ತಿದೆ. ಹಲವೆಡೆ ನೆರೆ ಉಂಟಾಗಿದೆ. ಇದರಿಂದ ಸಾಂಕ್ರಾಮಿಕ ರೋಗ ಬರುವ ಸಾಧ್ಯತೆ ಹೆಚ್ಚಿದೆ. ಮುಂಜಾಗ್ರತಾ ಕ್ರಮವಾಗಿ ಹಾಗೂ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಈ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇಂದು 100 ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ನಂತರ ಒಟ್ಟು 2000 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದರು. ಸರ್ಜಿ ಪೌಂಡೇಷನ್ ವತಿಯಿಂದ ಕಳೆದ ಮೂರು ವರ್ಷಗಳ ಹಿಂದೆ ಪ್ರವಾಹ ಸ್ಥಿತಿ ಉಂಟಾದಾಗ ಹಲವು ಬಡಾವಣೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಸುಮಾರು 2 ಸಾವಿರ ಮಂದಿಗೆ ಲಸಿಕೆ ನೀಡಲಾಗಿತ್ತು. ಎಲ್ಲ ಕ್ರಾಕ್ರಮಗಳಿಗೂ ಜಿಲ್ಲಾಡಳಿತ ಸಂಪೂರ್ಣ ಸಹಕಾರವನ್ನು ನೀಡಿದೆ ಎಂದು ಹೇಳಿದರು.

ಈ ಸಂದರ್ಭ ಸಾವಿರಕ್ಕೂ ಹೆಚ್ಚು ಮಕ್ಕಳಿಂದ ನಗರದ ಪ್ರಮುಖ ಬೀದಿಗಳಲ್ಲಿ ಹರ್ ಘರ್ ತಿರಂಗಾ ಜಾಥಾ ನಡೆಸಲಾಯಿತು. ಸಾವಿರಾರು ಮಕ್ಕಳು ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಎದುರು ಜಾಥಾ ಹೊರಟ ಸಂದರ್ಭ ಆಸ್ಪತ್ರೆಯ ಸಿಬ್ಬಂದಿ ಮಕ್ಕಳ ಮೇಲೆ ಪುಷ್ಪ ವೃಷ್ಟಿ ಮಾಡಿದರು. ಭಾರತ ಸೇವಾದಳದ ಜಿಲ್ಲಾಧ್ಯಕ್ಷ ವೈ.ಹೆಚ್. ನಾಗರಾಜ್, ಡಿಡಿಪಿಐ ಪರಮೇಶ್ವರಪ್ಪ, ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್, ಸದಸ್ಯೆ ಮೀನಾಕ್ಷಿ ಗೋವಿಂದ ರಾಜು, ಶಾಲೆಯ ಮುಖ್ಯ ಶಿಕ್ಷಕ ಕೆ.ಎಂ. ಮೋಹನ್, ಬಿಇಒ ನಾಗರಾಜ್, ಸೇವಾದಳದ ಪ್ರಸನ್ನ ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…