
ಶಿವಮೊಗ್ಗ: ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ ಬಾಕಿ ಇರುವ ಪ್ರಕರಣಗಳ ಶೀಘ್ರ ವಿಲೇವಾರಿ ಆಗುವುದರಿಂದ ಕಕ್ಷಿದಾರರಿಗೆ ಅನುಕೂಲವಾಗಲಿದ್ದು, ಜಿಲ್ಲೆಯಲ್ಲಿ ಬಾಕಿ ಉಳಿದ 52,369 ಪ್ರಕರಣಗಳಲ್ಲಿ ಲೋಕ್ ಅದಾಲತ್ ಮೂಲಕ 5500 ಪ್ರಕರಣಗಳು ತೀರ್ಮಾನವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮುಸ್ತಾಫ ಹುಸೇನ್ ಹೇಳಿದರು.ಅವರು ಇಂದು ನಗರದ ಪ್ರಧಾನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಉದ್ಘಾಟಿಸಿ ಸಂತ್ರಸ್ಥ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು.

ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಕರಣಗಳ ಇತ್ಯರ್ಥ ಆಗಿಲ್ಲ. ಮಳೆಯ ಕಾರಣದಿಂದ ಮತ್ತು ಖಾಸಗಿ ಕಂಪನಿಗಳು ಹಣಕಾಸಿನ ಸಂಬಂಧಿತ ವ್ಯಾಜ್ಯಗಳ ಬಗ್ಗೆ ಹೆಚ್ಚಿನ ಉತ್ಸಾಹ ತೋರದ ಕಾರಣ ಸ್ವಲ್ಪಮಟ್ಟಿಗೆ ಹಿನ್ನಡೆಯಾಗಿದೆ. 6 ಸಾವಿರಕ್ಕೂ ಅಧಿಕ ಕೇಸ್ ಗಳು ಬಾಕಿ ಉಳಿದಿದೆ. ಕಂದಾಯ, ಕಾರ್ಮಿಕ ಇಲಾಖೆ ಮತ್ತು ಸರ್ಕಾರಿ ಪ್ರಕರಣಗಳು ಸಾಕಷ್ಟು ರಾಜಿಸಂಧಾನವಾಗಿ ಇತ್ಯರ್ಥವಾಗಿವೆ ಎಂದರು.,ಕಾನೂನು ಸೇವಾ ಪ್ರಾಧಿಕಾರ ಪ್ರಕರಣಗಳನ್ನು ಬೇಗ ಇತ್ಯರ್ಥ ಮಾಡಲು ತಿದ್ದುಪಡಿ ಮಾಡುವುದರ ಮೂಲಕ ಶೀಘ್ರ ವಿಲೇವಾರಿಗೆ ಪ್ರಯತ್ನಿಸಿದೆ. ಇದೇ ವರ್ಷದ ಜನವರಿ 28 ರಂದು ಹೊಳೆಹೊನ್ನೂರು ರಸ್ತೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ರೇಣು ಎಸ್. ಎನ್ನುವವರು ಅಪಘಾತಕ್ಕೀಡಾಗಿದ್ದರು. ಕೇವಲ 8 ತಿಂಗಳೊಳಗೆ ಲೋಕ್ ಅದಾಲತ್ ಮೂಲಕ 19 ಲಕ್ಷ ರೂ. ಸಲ್ಲಿಕೆಯಾಗುತ್ತಿರುವುದು ವಿಶೇಷವಾಗಿದೆ.

ಮೃತಪಟ್ಟ ರೇಣು ಅವರು ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿದ್ದು ಇಂದು ಅವರ ಪತ್ನಿ ಕೋಕಿಲಾ ಅವರು ಪರಿಹಾರದ ಚೆಕ್ ಪಡೆದುಕೊಂಡಿದ್ದಾರೆ ಎಂದರು.ಅನೇಕ ಈ ರೀತಿಯ ಕೇಸ್ ಗಳಲ್ಲಿ ಲೋಕ್ ಅದಾಲತ್ ನಿಂದಾಗಿ ಪ್ರಕರಣಗಳು ಶೀಘ್ರ ವಿಲೇವಾರಿ ಆಗುವುದರಿಂದ ಅನುಕೂಲವಾಗಲಿದೆ. ಸಾರ್ವಜನಿಕರು ಲೋಕ್ ಅದಾಲತ್ ನ ಪ್ರಯೋಜನ ಪಡೆಯುವಂತೆ ಅವರು ವಿನಂತಿಸಿದರು.ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಮನು, ಪಲ್ಲವಿ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್ ಉಪಸ್ಥಿತರಿದ್ದರು.