ಶಿವಮೊಗ್ಗ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಇಂದಿನಿಂದ ಹರ್ ಘರ್ ತಿರಂಗಾ ಅಭಿಯಾನ ಆರಂಭವಾಗಿದ್ದು, ಅಭೂತ ಪೂರ್ವ ಸ್ಪಂದನೆ ವ್ಯಕ್ತವಾಗಿದೆ. ನಗರದ ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಾಡುತ್ತಿರುವುದು ಕಂಡು ಬಂದಿದೆ.
ಪ್ರಧಾನಿ ಮೋದಿ ಅವರ ಆಶಯದಂತೆ ಇಡೀ ದೇಶದಲ್ಲಿ ರಾಷ್ಟ್ರಧ್ವಜ ಮನೆ ಮನೆಗಳಲ್ಲಿ ಹಾರಿಸಲಾಗಿದೆ.
ಆ. 13 ರ ಬೆಳಗ್ಗೆಯಿಂದ ಆ. 15 ರ ಸಂಜೆವರೆಗೆ ಅಭಿಯಾನ ನಡೆಯಲಿದೆ. ಇದರ ಹಿನ್ನಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳ, ಬಡಾವಣೆಗಳ ಮುಖಂಡರು ರಾಷ್ಟ್ರಧ್ವಜವನ್ನು ತಮ್ಮ ಮನೆ, ಕಚೇರಿಗಳಲ್ಲಿ ಹಾರಿಸಿ ದೇಶಪ್ರೇಮ ಮೆರೆದರು.
ಇದೊಂದು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ನಗರದೆಲ್ಲೆಡೆ ಅಭೂತಪೂರ್ವ ಯಶಸ್ವಿಯಾಗಿದೆ. ಇದಲ್ಲದೇ ವಾಹನ ಚಾಲಕರು, ಆಟೋ ಚಾಲಕರು ಕೂಡ ತಮ್ಮ ವಾಹನಗಳಲ್ಲಿ ರಾಷ್ಟ್ರಧ್ವಜ ಕಟ್ಟಿಕೊಂಡು ದೇಶಪ್ರೇಮ ತೋರಿದರು. ಸರ್ಕಾರಿ ಕಚೇರಿಗಳಲ್ಲಿ, ಸಂಘ ಸಂಸ್ಥೆಗಳ ಕಚೇರಿಗಳಲ್ಲಿ ರಾಷ್ಟ್ರಧ್ವಜ ಹಾರಿಸಲಾಯಿತು.
ಜನಪ್ರತಿನಿಧಿಗಳಾದ ಕೆ.ಬಿ. ಅಶೋಕ್ ನಾಯ್ಕ್ ತಮ್ಮ ಮನೆ.ಮೇಲೆ ಧ್ವಜಾರೋಹಣ ಮಾಡಿದರು. ಬಸವಕೇಂದ್ರ, ಬೆಕ್ಕಿನ ಕಲ್ಮಠದಲ್ಲಿ ವಿವಿಧ ಶಾಲಾ, ಕಾಲೇಜುಗಳ ಮೇಲೆಯೂ ಧ್ವಜ ಹಾರಿಸಲಾಗಿತ್ತು.
ಹೋಂಗಾರ್ಡ್ಸ್ ಹಾಗೂ ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಂದ ತಿರಂಗಾ ಹಿಡಿದು ನಗರದಲ್ಲಿ ಜಾಥಾ ನಡೆಸಲಾಯಿತು.