ಶಿವಮೊಗ್ಗ: ಇಂದಿನ ಮಕ್ಕಳು ಸೂಕ್ಷ್ಮ ಮನಸ್ಸಿನವರಿದ್ದು, ಅವರಿಗೆ ಜೀವನವನ್ನು ಸರಳವಾಗಿ ಅರ್ಥೈಸುವ ಕೆಲಸವನ್ನು ಪೋಷಕರು ಮಾಡಬೇಕು ಎಂದು ಕಾಗಿನೆಲೆ ಕನಕಗುರುಪೀಠದ ಸಿಂಹಾಸನಾಧೀಶ್ವರ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿಗಳು ಹೇಳಿದರು.

ಅವರು ಇಂದು ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾ ಹಾಲುಮತ ಮಹಾಸಭಾ ವತಿಯಿಂದ ಆಯೋಜಿಸಿದ್ದ ಎಸ್‍ಎಸ್‍ಎಲ್‍ಸಿ ಮತ್ತು ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಾಲುಮತ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಹಿರಿಯರು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಪಿ. ಮೈಲಾರಪ್ಪ ಅವರಿಗೆ ‘ಹಾಲುಮತ ಚೇತನ’ ಗೌರವ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇಂದು ಪೋಷಕರು ತಮ್ಮ ಮಕ್ಕಳು ಅತಿ ಹೆಚ್ಚು ಅಂಕ ಪಡೆಯಬೇಕು ಎಂದಷ್ಟೇ ಬಯಸುತ್ತಾರೆ. ಅದಕ್ಕಾಗಿ ಅವರಿಗೆ ಒಳ್ಳೆಯ ಶಾಲೆಗೆ ಸೇರಿಸುವುದು, ಒಳ್ಳೆಯ ಬಟ್ಟೆ ಕೊಡಿಸುವುದನ್ನು ಮಾಡುತ್ತಾರೆ. ಮಕ್ಕಳಿಗೆ ಬೇಕಾದ ಜೀವನ ಮೌಲ್ಯವನ್ನು ಕಲಿಸುವುದನ್ನೇ ಮರೆಯುತ್ತಿದ್ದಾರೆ ಎಂದು ವಿಷಾದಿಸಿದರು.

ಹಾಲುಮತ ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಜಾಗೃತಿಯಾಗುತ್ತಿದೆ. ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಪ್ರೋತ್ಸಾಹಿಸುವುದು ಅವರು ಇನ್ನಷ್ಟು ಚೆನ್ನಾಗಿ ಓದಲಿ ಎಂಬ ಉದ್ದೇಶದಿಂದ. ಇಂದು ಪುರಸ್ಕರಿಸುತ್ತಿರುವ ಮಕ್ಕಳು ಇನ್ನಷ್ಟು ಪ್ರಗತಿ ಸಾಧಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ಸಮಾಜ ಮುಖಿ ಕೆಲಸಗಳಲ್ಲಿ ಭಾಗಿಯಾಗಲಿ ಎಂದು ಆಶಿಸಿದರು.
ಶಿವಮೊಗ್ಗದಲ್ಲಿ ಈ ಹಿಂದೆಯೇ ಶಾಖಾ ಮಠ ನಿರ್ಮಿಸಬೇಕೆನ್ನುವುದು ನಮ್ಮ ಆಶಯವಾಗಿತ್ತು. ಇದಕ್ಕೆ ಜಾಗ ಒದಗಿಸುವ ಕೆಲಸವನ್ನು ಇಲ್ಲಿನ ಸಮಾಜದ ಮುಖಂಡರು ಮಾಡಲಿಲ್ಲ. ಆದರೂ ಸಮಾಜದ ಋಣ ತೀರಿಸುವುದಕ್ಕಾಗಿ ಜೋಳಿಗೆ ಹಿಡಿದು, ಬೆಳ್ಳೋಡಿ, ಮೈಲಾರದಲ್ಲಿ ಮಠ ಸ್ಥಾಪಿಸಿದ್ದೇವೆ. ಒಳ್ಳೆಯ ಉದ್ದೇಶಕ್ಕೆ ಬೇಡಿದಲ್ಲಿ ಕೊಡುವ ಕೈಗಳಿಗೆ ಕೊರತೆಯಿಲ್ಲ ಎಂದು ಕನಕದಾಸರು ಹೇಳಿದಂತೆ ಮಠದ ನಿರ್ಮಾಣಕ್ಕೆ ದಾನಿಗಳು ಉದಾರವಾಗಿ ದಾನ ನೀಡಿದ್ದಾರೆ. ಶಿವಮೊಗ್ಗದಲ್ಲಿ ಇಂದಿನ ಕಾರ್ಯಕ್ರಮ ನೋಡಿದರೆ ಹಾಲುಮತ ಸಮಾಜ ಜಾಗೃತವಾಗುತ್ತಿದೆ ಎಂಬ ಭಾವನೆ ಬರುತ್ತಿದೆ ಎಂದರು.

ಈಗಾಗಲೇ ಗದಗ, ರೋಣ, ಬೆಳಗಾವಿಯಲ್ಲಿ ಮಠದ ಶಾಖೆಗಳನ್ನು ಸ್ಥಾಪಿಸಲು ಜಾಗ ಕೊಡುತ್ತಿದ್ದಾರೆ. ಆದರೆ ನಾವು ಅಲ್ಲಿಗೆ ಹೋಗಿ ರಿಜಿಸ್ಟರ್ ಮಾಡಿಸಲು ಸಮಯ ಬಂದಿಲ್ಲ. ಶಿವಮೊಗ್ಗದಲ್ಲೂ ಮಠ ಸ್ಥಾಪನೆಯಾಗಬೇಕು ಎಂದು ಪುನರುಚ್ಛರಿಸಿದರು.
ವೇದಿಕೆಯಲ್ಲಿ ಹೊಸದುರ್ಗಶಾಖಾ ಮಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಜಿಲ್ಲೆಯ 80ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಮಾಜಿ ಜಿ.ಪಂ. ಅಧ್ಯಕ್ಷ ಪಿ. ಮೈಲಾರಪ್ಪ ಅವರಿಗೆ ಗಣ್ಯರು ‘ಹಾಲುಮತ ಚೇತನ’ ಗೌರವ ಪುರಸ್ಕಾರ ಪ್ರದಾನ ಮಾಡಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್, ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳುಗುಳಿ, ರಾಜ್ಯ ಉಪಾಧ್ಯಕ್ಷ ಡಾ.ಡಿ.ಟಿ. ಪ್ರಶಾಂತ್, ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷೆ ಡಾ. ಸೌಮ್ಯ ಪ್ರಶಾಂತ್, ಹಾಲುಮತ ಮಹಾಸಭಾದ ಸಂಚಾಲಕ ರಾಜುಮೌರ್ಯ ಮೊದಲಾದವರು ಮಾತನಾಡಿದರು.

ಸೂಡಾ ಆಯುಕ್ತ ಕೊಟ್ರೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್, ಕನಕನ ಗೃಹ ನಿರ್ಮಾಣ ಸಂಘದ ಅಧ್ಯಕ್ಷ ಹೆಚ್.ಆರ್. ದೊಡ್ಡಪ್ಪ, ಸಮಾಜದ ಮುಖಂಡರಾದ ನವುಲೆ ಈಶ್ವರಪ್ಪ, ಎನ್. ವಿನಯ್, ಅವಿನಾಶ್, ಪ್ರದೀಪ್, ಷಡಾಕ್ಷರಪ್ಪ ಜಿ.ಆರ್., ನಿವೃತ್ತ ಅಬಕಾರಿ ಅಧಿಕಾರಿ ಮಂಜುನಾಥ್, ವಿವಿಧ ಇಲಾಖೆಯ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ವಿವಿಧ ನಿಗಮಗಳ ನಿರ್ದೇಶಕರು ಮೊದಲದವರಿದ್ದರು.
ಜಿಲ್ಲಾ ಹಾಲುಮತ ಮಹಾಸಭಾದ ಅಧ್ಯಕ್ಷ ಸಿ. ದಾನೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಗಣೇಶ್ ಬಿಳಿಗಿ ಸ್ವಾಗತಿಸಿ, ಕಾರ್ಯದರ್ಶಿ ಸುಹಾಸ್‍ಬಾಬು ವಂದಿಸಿದರು.

ವರದಿ ಪ್ರಜಾಶಕ್ತಿ…