ಶಿವಮೊಗ್ಗ: ಗ್ರಾಮ ಮಟ್ಟದಿಂದ ಸಂಸ್ಕೃತ ಕಲಿಸುವ ಅಭಿಯಾನ ಆಗಬೇಕು ಆಗ ಸಂಸ್ಕೃತ ಹೆಚ್ಚಿನ ಮಟ್ಟದಲ್ಲಿ ಬೆಳೆಯಲು ಸಾದ್ಯ ಎಂದು ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡರು ತಿಳಿಸಿದರು.

ಅವರು ಸಂಸ್ಕೃತ ಭಾರತೀ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಬಿ.ಬಿ.ರಸ್ತೆಯಲ್ಲಿರುವ ಸಂಸ್ಕೃತ ಭವನದಲ್ಲಿ ೩೨ ನೇ ರಾಜ್ಯಸ್ತರ ಸಂಸ್ಕೃತ ಭಾಷಣ ಸ್ಪರ್ಧೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತ ಭಾರತ ದೇಶ ಹಳ್ಳಿಗಳಿಂದ ಕೂಡಿದ ದೇಶ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಸಂಸ್ಕೃತಿಯ ವಾತಾವರಣ ನಿರ್ಮಾಣವಾಗಬೇಕು ಇದಕ್ಕೆ ಸಂಸ್ಕೃತದ ಜ್ಞಾನ ಅವಶ್ಯವಾಗಿದೆ ಹಾಗಾಗಿ ಸಂಸ್ಕೃತ ಕಲಿಕೆಯ ಅಭಿಯಾನಕ್ಕೆ ಚಾಲನೆ ನೀಡಿ ಎಂದು ಸಂಸ್ಕೃತ ಭಾರತಿಯ ಕಾರ್ಯಕರ್ತರಿಗೆ ಕರೆ ನೀಡಿದರು.

ಸಂಸ್ಕೃತ ಅತ್ಯಂತ ವೈಜ್ಞಾನಿಕವಾದ ಭಾಷೆ ಈ ಭಾಷೆಯನ್ನು ಕಲಿಯುವುದರ ಮೂಲಕ ನಮ್ಮ ದೇಶದ ಜ್ಞಾನ ಭಂಡಾರವನ್ನು ತಿಳಿಯುವಂತಾಗುತ್ತದೆ. ನಮ್ಮ ಋಷಿ ಮುನಿಗಳು ವಿಜ್ಞಾನ, ತಂತ್ರಜ್ಞಾನ, ಆಯುರ್ವೇದ, ಇತ್ಯಾದಿ ಪ್ರಮುಖ ವಿಷಯಗಳನ್ನು ಸಂಸ್ಕೃತ ಸಾಹಿತ್ಯ, ಶ್ಲೋಕ, ಗ್ರಂಥಗಳಲ್ಲಿ ಬರೆದಿಟ್ಟಿದ್ದಾರೆ, ನಮ್ಮ ದೇಶದಲ್ಲಿರುವ ಎಲ್ಲಾ ತಾಳೇಗರಿಯನ್ನು ಇನ್ನೂ ಪೂರ್ಣವಾಗಿ ಸಂಶೋಧನೆ ಮಾಡಲಾಗಿಲ್ಲ, ಹೆಚ್ಚು ಹೆಚ್ಚು ಜನರು ಸಂಸ್ಕೃತ ಕಲಿತು ಸಂಸ್ಕೃತ ಗ್ರಂಥಗಳಲ್ಲಿರುವ ಜ್ಞಾನವನ್ನು ಸಾಮಾನ್ಯ ಜನರಿಗೆ ತಲುಪಿಸುವಂತಾಗಬೇಕಿ ಎಂದರು. ಸರ್ಕಾರವು ಕೂಡ ಸಂಸ್ಕೃತ ಬಾಷಾ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ತಿಳಿಸಿದರು.

ಸಂಸ್ಕೃತ ಕಲಿಕೆಯಿಂದ ನಮ್ಮ ಜೀವನದ ಪದ್ಧತಿಯನ್ನು ಉತ್ತಮವಾಗಿ ನಡೆಸಲು ಸಾದ್ಯವಾಗುತ್ತದೆ ಇದಕ್ಕಾಗಿ ಹಲವಾರು ಸುಭಾಷಿತಗಳು, ಸಂಸ್ಕೃತ ಗ್ರಂಥಗಳು ನಮಗೆ ಸಹಕಾರಿಯಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಅಧ್ಯಕ್ಷ ಟಿ ವಿ ನರಸಿಂಹಮೂರ್ತಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಕೃತ ಭಾರತಿ ಜಿಲ್ಲಾಧ್ಯಕ್ಷ ಎನ್ ವಿ ಶಂಕರನಾರಾಯಣ, ಸ್ಪರ್ಧೆಯ ನಿರ್ಣಾಯಕರಾಗಿ ಡಾ. ನವೀನ ಭಟ್, ಶ್ರೀ ಅರುಣ್ ಕುಮಾರ್ ಕಾಳಗಿ ಮತ್ತು ವಿದುಷಿ ಸರಯೂ ಉಪಸ್ಥಿತರಿದ್ದರು.ಕಾರ್ಯಕ್ರಮದ ಸಂಯೋಜಕ ಅನಂತ ಕೃಷ್ಣ, ಮತ್ತೂರು ಶ್ರೀನಿಧಿ ಉಪಸ್ತಿತರಿದ್ದರು.

ಸ್ಪರ್ಧೆಯ ನಿರ್ಣಾಯಕರ ಪರಿಚಯವನ್ನು ಸಂಸ್ಕೃತ ಭಾರತಿ ಶಿಕ್ಷಕಿ ಸುಪ್ರಿಯ ಮಾಡಿಕೊಟ್ಟರು. ಜೆ.ಆರ್, ಸ್ವಾಗತಿಸಿದರು, ಪ್ರಜ್ಞಾ ಎಮ್, ವಂದಿಸಿದರು, ಅಂಜಲಿ ಎ, ನಿರೂಪಿಸಿದರು.

ವರದಿ ಮಂಜುನಾಥ್ ಶೆಟ್ಟಿ…