ಶಿವಮೊಗ್ಗ: ಬೂಸ್ಟರ್ ಡೋಸ್ ಬಗ್ಗೆ ಯಾವುದೇ ಆತಂಕ ಬೇಡ ಎಂದು ಆರ್.ಸಿ.ಹೆಚ್. ಡಾ. ನಾಗರಾಜ್ ನಾಯ್ಕ್ ಹೇಳಿದ್ದಾರೆ.
ಆರೋಗ್ಯ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆ ವತಿಯಿಂದ ಇಂದು ಮೀಡಿಯಾ ಹೌಸ್ ನಲ್ಲಿ ಆಯೋಜಿಸಿದ್ದ ಪತ್ರಕರ್ತರು ಮತ್ತು ಪತ್ರಿಕಾ ಸಿಬ್ಬಂದಿ ಹಾಗೂ ಕುಟುಂಬದವರಿಗೆ ಕೊರೋನಾ ಬೂಸ್ಟರ್ ಡೋಸ್ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊರೋನಾ ಲಸಿಕೆಯನ್ನು ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 13.08 ಲಕ್ಷ ಜನರಿಗೆ ನೀಡಲಾಗಿದೆ. ಎರಡನೇ ಡೋಸ್ ಕೂಡ ಶೇ. 100 ರಷ್ಟು ಯಶಸ್ವಿಯಾಗಿದೆ. ಬೂಸ್ಟರ್ ಡೋಸ್ ನೀಡುವಲ್ಲಿ ಕೂಡ ಶೇ. 36 ರಷ್ಟು ಪ್ರಗತಿ ಸಾಧಿಸಿದ್ದೇವೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಮೊದಲ ಎರಡು ಡೋಸ್ ಪಡೆದವರಲ್ಲಿ ಹೆಚ್ಚಳವಾಗಿರುವುದರಿಂದ ಮೂರನೇ ಮತ್ತು ನಾಲ್ಕನೇ ಅಲೆಯಲ್ಲಿ ಸಾವಿನ ಸಂಖ್ಯೆ ಅತ್ಯಂತ ಕಡಿಮೆಯಾಗಿತ್ತು ಎಂದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಸೆ. 31 ರ ವರೆಗೆ ಉಚಿತವಾಗಿ ಬೂಸ್ಟರ್ ಡೋಸ್ ನೀಡಲು ತೀರ್ಮಾನಿಸಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆಯುವಂತೆ ಅವರು ತಿಳಿಸಿದರು.
100 ಅಥವಾ 150 ಜನರು ಏಕಕಾಲದಲ್ಲಿ ಲಸಿಕೆ ಪಡೆಯಲು ಇಚ್ಛಿಸಿದಲ್ಲಿ ಅವರಿರುವ ಸ್ಥಳಕ್ಕೆ ಹೋಗಿ ಆರೋಗ್ಯ ಇಲಾಖೆ ಲಸಿಕೆ ನೀಡಲಿದೆ. ಬೂಸ್ಟರ್ ಡೋಸ್ ನಿಂದ ಯಾವುದೇ ಅಪಾಯವಿಲ್ಲ. ಇದರ ಬಗ್ಗೆ ಊಹಾಪೋಹಗಳಿಗೆ ಕಿವಿಗೊಡಬೇಡಿ. ಯಾವುದೇ ಲಸಿಕೆ ನೀಡುವ ಮೊದಲು ಅದನ್ನು ಹಲವು ಬಾರಿ ಪರೀಕ್ಷೆ, ಪ್ರಯೋಗಕ್ಕೆ ಒಳಪಡಿಸಲಾಗುತ್ತದೆ. ಈ ಹಿಂದೆ ಸರ್ಕಾರ ನೀಡಿದ ಪೋಲಿಯೋ ಲಸಿಕೆ ಸೇರಿದಂತೆ ಅನೇಕ ಲಸಿಕೆ ನಮ್ಮ ದೇಶದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿವೆ. ಕೊರೋನಾ ಲಸಿಕೆಯಿಂದ ಕೂಡ ಒಳ್ಳೆಯ ಪರಿಣಾಮ ಸಿಕ್ಕಿದೆ, ಆತಂಕಪಡುವ ಅವಶ್ಯಕತೆ ಇಲ್ಲ. ಸೆ. 31 ರ ನಂತರ ಲಸಿಕೆ ಪಡೆಯಲು 385 ರೂ. ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಮೇಯರ್ ಸುನಿತಾ ಅಣ್ಣಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ಕೆ.ವಿ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್, ಜಿಲ್ಲಾ ಉಪಾಧ್ಯಕ್ಷ ವೈದ್ಯ, ಹಾಲಸ್ವಾಮಿ, ರಾಜ್ಯ ಸಂಘದ ನಿರ್ದೇಶಕ ರವಿಕುಮಾರ್, ಡಾ. ತಿಮ್ಮಪ್ಪ, ಡಾ. ಭಾಗ್ಯ, ಡಾ. ಹರ್ಷಿತಾ, ವೆಂಕಟೇಶ್ , ಸೋಮನಾಥ್ , ನಾಗರಾಜ್ ಶೆಣೈ ಮುಂತಾದವರು ಇದ್ದರು.