ಆರೋಗ್ಯಯುತವಾದ ದೇಹದಲ್ಲಿ ಆರೋಗ್ಯವಂತ ಮನಸ್ಸು ಇರುತ್ತದೆ. ಕ್ರೀಡೆಯಿಂದ ಇವೆರಡನ್ನೂ ಹೊಂದಬಹುದಾಗಿದ್ದು, ಎಲ್ಲರೂ ಉತ್ಸಾಹದಿಂದ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಸಂಸದರಾದ ಬಿ.ವೈ.ರಾಘವೇಂದ್ರ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿವಿಧ ಕ್ರೀಡಾ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಇಂದು ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ 2022-23 ನೇ ಸಾಲಿನ ಶಿವಮೊಗ್ಗ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಧ್ವಜಾರೋಹಣ ಮತ್ತು ಗುಂಡು ಎಸೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ವಯಸ್ಸಿನ ಇತಿ-ಮಿತಿ ಇಲ್ಲ. ಮನಸ್ಸು ಉಲ್ಲಸಿತವಾಗಿ, ಸಂತಸದಿಂದಿರಲು ಕ್ರೀಡೆ ಸಹಕಾರಿ. ಆದ್ದರಿಂದ ಎಲ್ಲರೂ ನಾಡಹಬ್ಬ ದಸರಾ ಪ್ರಯುಕ್ತ ಹಮ್ಮಿಕೊಂಡಿರುವ ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.
ನಮ್ಮ ಸಂಸ್ಕøತಿಯನ್ನು ಬಿಂಬಿಸುವಂತಹ ವಿವಿಧ ಕಾರ್ಯಕ್ರಮಗಳು ನವರಾತ್ರಿಯ ಒಂಭತ್ತು ದಿನಗಳು ನಡೆಯುತ್ತವೆ. ಈ ಬಾರಿ ಮೈಸೂರು ದಸರಾ ಉತ್ಸವವನ್ನು ನಮ್ಮ ರಾಷ್ಟ್ರಪತಿಗಳು ಉದ್ಘಾಟಿಸುವುದು ವಿಶೇಷವಾಗಿದ್ದು, ಸಾಂಸ್ಕøತಿಕ ನಗರಿ ಮೈಸೂರು ಬಿಟ್ಟರೆ ಅದ್ದೂರಿಯಾಗಿ ದಸರಾ ಆಚರಣೆ ಮಾಡುವ ಎರಡನೇ ಜಿಲ್ಲೆ ಶಿವಮೊಗ್ಗ. ಪಾಲಿಕೆ ವತಿಯಿಂದ ಶಿವಮೊಗ್ಗದಲ್ಲಿ ನವರಾತ್ರಿ ವೇಳೆ ವಿವಿಧ ಸಾಂಸ್ಕøತಿಕ, ಕ್ರೀಡೆ ಸೇರಿದಂತೆ ಚಟುವಟಿಕೆಗಳು ನಡೆಯಲಿದ್ದು, ನಗರದ ದೇವರುಗಳೆಲ್ಲ ಒಂದೆಡೆ ಸೇರಿ ವಿಜೃಂಭಣೆಯಿಂದ ಬನ್ನಿ ಮುಡಿಯುವ ಕಾರ್ಯ ಜರುಗಲಿದೆ. ಎಲ್ಲರೂ ಈ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕೆಂದರು.

ಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ ಮಾತನಾಡಿ, ನಮ್ಮ ನಾಡೇ ಸಂಭ್ರಮಿಸುವ ದಸರಾ ಪ್ರಯುಕ್ತ ಜಿಲ್ಲೆಯಲ್ಲಿ ಹಲವಾರು ಸಾಂಸ್ಕøತಿಕ, ಕ್ರೀಡೆ ಹಾಗೂ ಇತರೆ ಚಟುವಟಿಕೆಗಳು ಜರುಗುತ್ತವೆ. ಪಾಲಿಕೆ ವತಿಯಿಂದ ಸಹ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲರಿಗೆ ವಿವಿಧ ಸಾಂಸ್ಕøತಿಕ ಮತ್ತು ಕ್ರೀಡೆ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. 10 ದಿನಗಳ ಕಾಲ ವಿವಿಧ ಸಾಂಸ್ಕøತಿಕ ಚಟುವಟಿಕೆಗಳು ನಡೆಯಲಿದ್ದು ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಬಹುಮಾನಕ್ಕಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಬಹು ಮುಖ್ಯವಾಗಿದ್ದು, ಜಿಲ್ಲಾ ಮಟ್ಟದ ಈ ಕ್ರೀಡಾಕೂಟದಲ್ಲಿ ಎಲ್ಲರೂ ಸ್ಪಧಾತ್ಮಕ ಮನೋಭಾವ ಮತ್ತು ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಂಗಲ್ ರೆಸಾರ್ಟ್ ನಿರ್ದೇಶಕ ರಾಜೇಶ್ ಕಾಮತ್, ಸಿಮ್ಸ್ ಆಡಳಿತ ಮಂಡಳಿ ನಿರ್ದೇಶಕ ದಿವಾಕರ್ ಶೆಟ್ಟಿ, ಜಿ.ಪಂ ಮಾಜಿ ಸದಸ್ಯ ವೀರಭದ್ರಪ್ಪ, ಜಿ.ಪಂ ಯೋಜನಾ ನಿರ್ದೇಶಕಿ ನಂದಿನಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಇತರರು ಪಾಲ್ಗೊಂಡಿದ್ದರು.

ವರದಿ ಪ್ರಜಾಶಕ್ತಿ…