ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿ ರೈಲ್ವೆ ಇಲಾಖೆಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳು ಹಾಗೂ ಪ್ರಯಾಣಿಕರ ಕುಂದು ಕೊರತೆಗಳ ವಿಚಾರಣೆ ಸಂದರ್ಭದಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಮಧ್ಯಾಹ್ನದ ಸಮಯದಲ್ಲಿ ರೈಲು ಸೌಲಭ್ಯವನ್ನು ಕಲ್ಪಿಸಿಕೊಡಲು ಸಂಸದರಾದ ಬಿ.ವೈ. ರಾಘವೇಂದ್ರರವರು ಮನವಿ ಮಾಡಿದ್ದರು.

ಸಂಸದರ ಮನವಿಗೆ ಸ್ಪಂದಿಸಿರುವ ಜನರಲ್ ಮ್ಯಾನೇಜರ್ ರವರು 06513/06514 ತುಮಕೂರು-ಅರಸಿಕೆರೆ-ತುಮಕೂರು ಡೆಮೋ ಅನ್ ರಿಸರ್ವಡ್ ಎಕ್ಸ್‍ಪ್ರೆಸ್ ವಿಶೇಷ ರೈಲನ್ನು ಶಿವಮೊಗ್ಗದವರೆಗೂ ವಿಸ್ತರಿಸಿ ದಿನಾಂಕ: 12.09.2022ರಿಂದ ಪ್ರಯಾಣ ಸೇವೆಯನ್ನು ಪ್ರಾರಂಭಿಸಿದ್ದಾರೆ.

ಈ ರೈಲು ತುಮಕೂರಿನಿಂದ ಬಾಣಸವಾಡಿಯವರೆಗೆ ಈಗಾಗಲೇ ಪ್ರಯಾಣಿಸುತ್ತಿರುವುದರಿಂದ, ಶಿವಮೊಗ್ಗದ ಜನತೆಯು ಈ ರೈಲಿನಲ್ಲಿ ಶಿವಮೊಗ್ಗದಿಂದ ಹೊರಟು ಬಾಣಸವಾಡಿಯವರೆಗೂ ಹೋಗಬಹುದಾಗಿದ್ದು, ಯಶವಂತಪುರ ಮಾರ್ಗವಾಗಿ ಹೋಗುವುದರಿಂದ, ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಪ್ರಯಾಣಿಕರು ಶಿವಮೊಗ್ಗದಿಂದ ಬಾಣಸವಾಡಿಯವರೆಗೂ ಟಿಕೆಟ್ ಪಡೆದು ಅದೇ ರೈಲಿನಲ್ಲಿ ಬಾಣಸವಾಡಿಯವರೆಗೂ ಪ್ರಯಾಣಿಸಬಹುದಾಗಿದ್ದು, ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

ನೂತನ ರೈಲಿನ ವೇಳಾಪಟ್ಟಿ…

ಶಿವಮೊಗ್ಗ ಮಧ್ಯಾಹ್ನ 01.05ಕ್ಕೆ ಬಿಟ್ಟು ಸಂಜೆ 5.30ಕ್ಕೆ ತುಮಕೂರು ತಲುಪಲಿದ್ದು, 5.40ಕ್ಕೆ ತುಮಕೂರು ಬಿಟ್ಟು ಯಶವಂತಪುರವನ್ನು ಸಂಜೆ 6.50ಕ್ಕೆ ತಲುಪಿ, ಸಂಜೆ 7.40ಕ್ಕೆ ಬಾಣಸವಾಡಿ ತಲುಪುತ್ತದೆ. ಅದೇ ರೀತಿ ಬೆಳಿಗ್ಗೆ 5.50ಕ್ಕೆ ಬಾಣಸವಾಡಿ ಬೆಳಿಗ್ಗೆ 6.40ಕ್ಕೆ ಯಶವಂತಪುರ, 7.55ಕ್ಕೆ ತುಮಕೂರು ಹಾಗೂ 8.05ಕ್ಕೆ ತುಮಕೂರು ಬಿಟ್ಟು ಮಧ್ಯಾಹ್ನ 12.30ಕ್ಕೆ ಶಿವಮೊಗ್ಗ ಬರಲಿದೆ.
ತಮ್ಮ ಮನವಿಗೆ ಸ್ಪಂದಿಸಿದ ರೈಲ್ವೆ ಜನರಲ್ ಮ್ಯಾನೇಜರ್ ರವರಿಗೆ ಧನ್ಯವಾದಗಳನ್ನು ತಿಳಿಸಿರುವ ಸಂಸದರು, ಈ ರೈಲಿನ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.

ವರದಿ ಮಂಜುನಾಥ ಶೆಟ್ಟಿ…