ಶಿವಮೊಗ್ಗ: ಪದವೀಧರರ ಸಹಕಾರ ಸಂಘ 2021-22ನೇ ಸಾಲಿನಲ್ಲಿ 173.6 ಕೋಟಿ ರೂ. ವ್ಯವಹಾರ ನಡೆಸಿ 1.01 ಕೋಟಿ ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ 6500ಕ್ಕೂ ಹೆಚ್ಚು ಸದಸ್ಯರಿದ್ದು, 3.36 ಕೋ.ರೂ.ನಿವ್ವಳ ಷೇರು ಬಂಡವಾಳ ಹೊಂದಿದ್ದು, ಆಪದ್ಧನ ನಿಧಿಯಲ್ಲಿ 2.44 ಕೋಟಿ ರೂ. ಹಾಗೂ ಕಟ್ಟಡ ನಿಧಿಯಲ್ಲಿ 4.40 ಕೋಟಿ ರೂ. ಇತರೆ ನಿಧಿಗಳಲ್ಲಿ 1.94 ಕೋಟಿ ರೂ. ಇದ್ದು, ಸದಸ್ಯರಿಂದ 61.79 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, 47.85 ಕೋಟಿ ರೂ. ಸಾಲ ನೀಡಲಾಗಿದೆ. ಸಾಲ ವಸೂಲಾತಿಯೂ ಶೇ.1.10 ರಷ್ಟಿದೆ ಎಂದರು.

ಸಂಘದ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಕೃಷಿ ನಗರದಲ್ಲಿ 91.50 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಿದ ನಿವೇಶನದಲ್ಲಿ 2.69 ಕೋಟಿ ರೂ.ವೆಚ್ಚದಲ್ಲಿ 4 ಅಂತಸ್ತಿನ ನೂತನ ಶಾಖಾ ಕಟ್ಟಡವನ್ನು ನಿರ್ಮಿಸುತ್ತಿದ್ದು, ಮೊದಲು ಅಂತಸ್ತಿನಲ್ಲಿ ಶಾಖಾ ಕಚೇರಿ, 2ನೇ ಅಂತಸ್ತಿನಲ್ಲಿ 1500 ಲಾಕರ್ ವುಳ್ಳ ಲಾಕರ್ ಪ್ಲಾಜಾ ಹಾಗೂ ಇನ್ನೊಂದು ಅಂತಸ್ತಿನಲ್ಲಿ ಸ್ಫರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವಿರುವ ಮಿನಿ ಅಡಿಟೋರಿಯಂ ಇರುತ್ತದೆ ಎಂದರು.

ಸೆ.17ರ ಸಂಜೆ 5.30ಕ್ಕೆ ಸವಳಂಗ ರಸ್ತೆಯಲ್ಲಿರುವ ಸರ್ಜಿ ಕನ್ವೆನ್‌ಷನ್ ಹಾಲ್‌ನಲ್ಲಿ ಸಂಘದ ಸುವರ್ಣ ಮಹೋತ್ಸವವನ್ನು ಬೆಕ್ಕಿನ ಕಲ್ಮಠದ ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ಅವರು ಉದ್ಘಾಟಿಸಲಿದ್ದು, ಹಾಗೂ ನೂತನ ಶಾಖಾ ಕಟ್ಟಡಕ್ಕೆ ಬಸವ ಕೇಂದ್ರದ ಡಾ.ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಕೆ.ಎಸ್.ಈಶ್ವರಪ್ಪ, ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಮಂಜುನಾಥ ಭಂಡಾರಿ, ಡಿ.ಎಸ್. ಅರುಣ್, ಸಹಕಾರ ಸಂಘಗಳ ನಿಬಂಧಕ ಡಾ.ರಾಜೇಂದ್ರ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.

ಸರ್ವ ಸದಸ್ಯರ ಸಭೆ…

ಸಂಘದ 47ನೇ ವಾರ್ಷಿಕ ಸರ್ವ ಸದಸ್ಯರ ಸಭೆಯು ಸೆ.18 ರ ಬೆಳಿಗ್ಗೆ 9.30ಕ್ಕೆ ಸವಳಂಗ ರಸ್ತೆಯಲ್ಲಿರುವ ಸರ್ಜಿ ಕನ್ವೆನ್‌ಷನ್ ಹಾಲ್‌ನಲ್ಲಿ ನಡೆಯಲಿದ್ದು, ಸಂಘದ ಸದಸ್ಯರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡುವುದರ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಎಸ್.ಮಮತಾ, ನಿರ್ದೇಶಕರಾದ ಜೋಗದ ವೀರಪ್ಪ, ಹೆಚ್.ಸಿ.ಸುರೇಶ್, ಎಸ್.ರಾಜಶೇಖರ್, ಡಾ.ಎಸ್.ಹೆಚ್.ಪ್ರಸನ್ನ, ಡಾ.ಯು.ಚಂದ್ರಶೇಖರಪ್ಪ, ಎಸ್.ಕೆ.ಕೃಷ್ಣಮೂರ್ತಿ, ಯು.ರಮ್ಯಾ, ಡಿ.ಎಸ್.ಭುವನೇಶ್ವರಿ, ಕಾರ್ಯದರ್ಶಿ ಗೋಪಾಲಕೃಷ್ಣ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…