1971ನೇ ವರ್ಷ ಶಿವಮೊಗ್ಗ ನಗರಕ್ಕೆ ರೋಜಾ ಅಡಿಕೆ ಪುಡಿಯ ಪರ್ಚೇಸಿಂಗ್ ಮ್ಯಾನೇಜರ್ ಆಗಿ ನೇಮಿಸಲ್ಪಟ್ಟು ತಮಿಳುನಾಡಿನ ದಿಂಡಿಕ್ಕಲ್ ಮೂಲದ ಶ್ರೀ ಶ್ರೀ ರೋಜಾಷಣ್ಮುಗಂ ಗುರೂಜಿಯವರು ಕಳೆದ 50 ವರ್ಷಗಳಲ್ಲಿ ಶಿವಮೊಗ್ಗ ನಗರವಾಸಿಯಾಗಿದ್ದು ಕನ್ನಡವನ್ನು ಕಲಿತು, ಕನ್ನಡಿಗರೊಂದಿಗೆ ಬೆರೆತು, ಕನ್ನಡಾಂಬೆಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

ಅಂದಿನಿಂದ ಇಂದಿನವರೆಗೂ ಹಲವು ಸಂಘ – ಸಂಸ್ಥೆಗಳಲ್ಲಿ ಸಮಾಜ ಮುಖಿ ಕಾರ್ಯಗಳನ್ನು ನಡೆಸಿರುತ್ತಾರೆ, ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗಿ ಕವಿಗೋಷ್ಠಿಗಳನ್ನು-ವಿಚಾರ ಸಂಕೀರ್ಣಗಳನ್ನು ನಡೆಸಿರುತ್ತಾರೆ ಹಾಗೂ ಚರ್ಚಾ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

80ರ ದಶಕದಲ್ಲಿ ಕೇವಲ ಒಂದು ಪಂಗಡಕ್ಕೆ ಮಾತ್ರ ಸೀಮಿತವಾಗಿದ್ದ ಶ್ರೀ ಅಯ್ಯಪ್ಪ ಸ್ವಾಮಿಯನ್ನು ಎಲ್ಲರಿಗೂ ಪರಿಚಯಿಸಿದ ಕೀರ್ತಿ ನಮ್ಮ ಗುರುಗಳಿಗೆ ಸಲ್ಲುತ್ತದೆ. 70ರ ದಶಕದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿಯನ್ನು ಪ್ರಾರಂಭಿಸಿ, ಹಂತ – ಹಂತವಾಗಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತರನ್ನು ಒಗ್ಗೂಡಿಸಿ ಶಿವಮೊಗ್ಗದ ಬಿ. ಬಿ ರಸ್ತೆಯ ರಾಮಣ್ಣಶ್ರೇಷ್ಠಿ ಪಾರ್ಕ ಪಕ್ಕ ಶ್ರೀ ಸಾರ್ವಜನಿಕ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ನಿರ್ಮಿಸಿರುತ್ತಾರೆ.

ಈ ದೇಗುಲದಲ್ಲಿ 50 ವರ್ಷಗಳ ಕಾಲ ಪ್ರಧಾನ ಗುರುಸ್ವಾಮಿಗಳಾಗಿ ಸೇವೆ ಸಲ್ಲಿಸಿರುತ್ತಾರೆ.ತಮ್ಮ ಜೀವನದಲ್ಲಿ ಕಷ್ಟಪಟ್ಟು ನೋವು, ಅವಮಾನಗಳನ್ನು ಸಹಿಸಿಕೊಳ್ಳುತ್ತಾ ಶ್ರೀ ಅಯ್ಯಪ್ಪ ಸ್ವಾಮಿಯನ್ನು ಜನರ ಮನೆಮನೆಗೂ ತಲುಪುವಂತೆ ಮಾಡಿರುತ್ತಾರೆ.

ಇದಾದ ಬಳಿಕ ಗುಡ್ಡೆಕಲ್ಲು, ಬೆಜ್ಜವಳ್ಳಿ, ಹಸೂಡಿ ಫಾರಂ, ಆನವಟ್ಟಿ, ಕಾಚಿನಕಟ್ಟೆ, ಗಾಡಿಕೊಪ್ಪ ,ಕಾರ್ಗಲ್,ಹೊಸನಗರ ಹೀಗೆ 25 ಕ್ಕೂ ಹೆಚ್ಚು ಶ್ರೀ ಅಯ್ಯಪ್ಪ ಸ್ವಾಮಿ ದೇಗುಲಗಳಲ್ಲಿ ಕರ್ನಾಟಕದಾದ್ಯಂತ ನಿರ್ಮಿಸುವಲ್ಲಿ ತಮ್ಮ ಶ್ರಮ, ತನು, ಮನ, ಧನವನ್ನು ಅರ್ಪಿಸಿರುತ್ತಾರೆ.

ಇತ್ತೀಚೆಗೆ ಸಿರಿಗೆರೆಯಲ್ಲಿ ಸಹ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ನಿರ್ಮಾಣದ ಕನಸ್ಸನ್ನು ಹೊಂದಿರುತ್ತಾರೆ. ಅದೇ ರೀತಿಯಲ್ಲಿ ಶಿವಮೊಗ್ಗ ನಗರದ ಜನಪರ ಸಂಸ್ಥೆಯಾದ ಲಯನ್ಸ್ ಕ್ಲಬ್ ನಲ್ಲಿ ಅಧ್ಯಕ್ಷರಾಗಿ, ಲಯನ್ಸ್ ಭವನ್ ನ ಸಂಸ್ಥಾಪಕರಾಗಿಯೂ, ಡೆಪ್ಯುಟಿ ಡಿಸ್ಟ್ರಿಕ್ಟ್ ಗವರ್ನರ್ ಆಗಿಯೂ ಮತ್ತೆ ಇತರೆ ಹುದ್ದೆಗಳಲ್ಲಿ ಸುಮಾರು 50 ವರ್ಷಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ.

ಶಿವಮೊಗ್ಗ – ಭದ್ರಾವತಿ ನಗರದ ಕಾರ್ಪೊರೇಟರ್ ಆಗಿಯೂ ಸೇವೆ – ಸಲ್ಲಿಸಿರುತ್ತಾರೆ. ಇದಲ್ಲದೆ ತಮಿಳು ಸಂಘದ ಅಧ್ಯಕ್ಷರು ಜಿಲ್ಲಾ Football Association ಒಕ್ಕೂಟದ ಶಿವಮೊಗ್ಗ ಖಜಾಂಚಿಯಾಗಿ , ರಾಜ್ಯ ಮಟ್ಟದ ಅಂತರ ಜಾತಿ ವಿವಾಹ ಒಕ್ಕೂಟದ ಅಧ್ಯಕ್ಷರಾಗಿ, Family Planning Association of India ಶಿವಮೊಗ್ಗ ಇದರ ನಿರ್ದೇಶಕರಾಗಿಯೂ, Govt McGann Hospital ನಲ್ಲಿ Board of visitor ಆಗಿಯೂ, ಅಡಿಕೆ ವರ್ತಕರ ಸಂಘದ ಶಿವಮೊಗ್ಗ ಇದರ ನಿರ್ದೇಶಕರಾಗಿ … ಹೀಗೆ ಹಲವು ಹತ್ತು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ.

ಹಾಗೆಯೇ ಶ್ರೀ ಅಯ್ಯಪ್ಪ ಸ್ವಾಮಿಯ ಗೀತೆ ರಚನೆಗಳನ್ನು ಮಾಡಿ ಧ್ವನಿ ಸುರುಳಿಯ ಮೂಲಕ ಮನೆ ಮನೆಗಳಿಗೂ ಮನ ಮನಕ್ಕೂ ಶ್ರೀ ಅಯ್ಯಪ್ಪ ಸ್ವಾಮಿಯನ್ನು ತಲುಪಿಸುತ್ತಾರೆ. ಶ್ರೀ ಅಯ್ಯಪ್ಪ ಸ್ವಾಮಿಯ ವ್ರತಾಚರಣೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಲಕ್ಷಾಂತರ ಭಕ್ತರಿಗೆ ಮಾಲೆ ಧಾರಣೆ ಮಾಡಿಸಿ ವ್ರತ ನಿಯಮಗಳಲ್ಲಿ ತಿಳಿ ಹೇಳಿ ಶಬರಿಮಲೆ ಯಾತ್ರೆ ಮಾಡಿಸಿ ಸಮಾಜದ ಬದಲಾವಣೆಗೆ ಕಾರಣ ಕರ್ತರಾಗಿರುತ್ತಾರೆ.

ದಿನಾಂಕ 17.09.2022 ರ ಶನಿವಾರ ಸಂಜೆ 5 ಗಂಟೆಗೆ ಸುವರ್ಣ ಸಂಸ್ಕೃತಿ ಭವನ, ಹೆಲಿಪ್ಯಾಡ್ ಹತ್ತಿರ ಶಿವಮೊಗ್ಗ ಇಲ್ಲಿ “ನಡೆದಾಡುವ ಅಯ್ಯಪ್ಪ” ಪೂಜ್ಯ ಶ್ರೀ ಶ್ರೀ ರೋಜಾ ಷಣ್ಮುಗಂ ಗುರೂಜಿ ಅವರ “ನೆನಪು – ನುಡಿ – ನಮನ” ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಕಾರ್ಯಕ್ರಮವು ಪರಮ ಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಡಾ II ಮುರುಘರಾಜೇಂದ್ರ ಸ್ವಾಮೀಜಿ ಬೆಕ್ಕಿನ ಕಲ್ಮಠ ಶಿವಮೊಗ್ಗ ಹಾಗೂ ಪರಮ ಪೂಜ್ಯ ಶ್ರೀ ಶ್ರೀ ಪ್ರಸನ್ನ ನಾಥ ಸ್ವಾಮೀಜಿ ಆದಿಚುಂಚನಗಿರಿ ಸಂಸ್ಥಾನ ಶಿವಮೊಗ್ಗ ಇವರ ದಿವ್ಯ ಸಾನಿಧ್ಯದಲ್ಲಿ ನೆರವೇರಲಿದೆ.

ಈ ಕಾರ್ಯಕ್ರಮವನ್ನು ವೃಕ್ಷಮಾತೆ, ಪದ್ಮಶ್ರೀ ಹಾಗೂ ನಾಡೋಜ ಪುರಸ್ಕೃತರಾದ ಸಾಲುಮರದ ತಿಮಕ್ಕನವರು ದೀಪ ಬೆಳಗುವ ಮೂಲಕ ಚಾಲನೆ ನೀಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು – ಶಿಕಾರಿಪುರ ಕ್ಷೇತ್ರದ ವಿಧಾನಸಭೆ ಸದಸ್ಯರೂ, ಶಾಸಕರೂ ಆದ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪನವರು; ಶಿವಮೊಗ್ಗ ಲೋಕಸಭಾಕ್ಷೇತ್ರದ ಸ‌ಂಸದರಾದ ಸನ್ಮಾನ್ಯ ಶ್ರೀ ಬಿ. ವೈ. ರಾಘವೇಂದ್ರ ರವರು ಹಾಗೂ ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಕೆ. ಎಸ್.ಈಶ್ವರಪ್ಪನವರು ಆಗಮಿಸಲಿದ್ದಾರೆ.

ಜೊತೆಗೆ ವಿಧಾನ ಪರಿಷತ್ತಿನ ಸದಸ್ಯರು ಶಾಸಕರುಗಳೂ ಆದ ಸನ್ಮಾನ್ಯ ಶ್ರೀ ಆಯನೂರು ಮಂಜುನಾಥ್ ಹಾಗೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವಿಧಾನ ಸಭಾ ಸದಸ್ಯರೂ ಶಾಸಕರೂ ಆದ ಸನ್ಮಾನ್ಯ ಶ್ರೀ ಅಶೋಕ್ ನಾಯಕ್ , ಶ್ರೀ ಡಿ. ಎಸ್ ಅರುಣ್ ಅವರು, ಭದ್ರಾವತಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಬಿ. ಕೆ ಸಂಗಮೇಶ್ವರ ಮತ್ತು ಶಿವಮೊಗ್ಗ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಕೆ. ಬಿ ಪ್ರಸನ್ನ ಕುಮಾರ್ ಅವರುಗಳು ವಿಶೇಷ ಆಹ್ವಾನಿತರಾಗಿರುತ್ತಾರೆ.

ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಶ್ರೀ ಡಾ II ಸೆಲ್ವಮಣಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು; ಶ್ರೀ ಶಬರೀಶ್ ಷಣ್ಮುಗಂ, ಜಾಗತಿಕ ಮಾಹಿತಿ ತಂತ್ರಜ್ಞಾನ, ಶ್ರೀ ಅಯ್ಯಪ್ಪ ಗುರುಸ್ವಾಮಿಗಳು, BASS ನ ಅಂತರ ರಾಷ್ಟ್ರೀಯ ಅಧ್ಯಕ್ಷರು ಇವರ ಉಪಸ್ಥಿತಿಯಲ್ಲಿ ನೆರವೇರಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಶ್ರೀ ಅಯ್ಯಪ್ಪ ಸ್ವಾಮಿ ಗುರುಸ್ವಾಮಿಗಳು, ಶ್ರೀ ಅಯ್ಯಪ್ಪ ಸ್ವಾಮಿ ಶಿಷ್ಯರು, ಗುರೂಜಿಯವರ ಹಿತೈಷಿಗಳು, ಶಿವಮೊಗ್ಗ ಲಯನ್ಸ್ ಕ್ಲಬ್ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರುಗಳು ಆಗಮಿಸಲಿದ್ದಾರೆ. ಸುಧ್ದಿ – ಮಾಧ್ಯಮದ ಮಿತ್ರರನ್ನು ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಶೇಷವಾಗಿ ಆಹ್ವಾನಿಸುತ್ತಿರುವೆವು.

ಮುಂದಿನ ದಿನಗಳಲ್ಲಿ ಶ್ರೀ ಶ್ರೀ ರೋಜಾ ಷಣ್ಮುಗಂ ಗುರೂಜಿಯವರ ಶಿಷ್ಯರು ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲು ಮುಂದಾಗಿರುತ್ತಾರೆ. ಈ ಕಾರ್ಯಕ್ರಮಕ್ಕೆ ಶಿವಮೊಗ್ಗ ನಾಗರೀಕರು ಪಾಲ್ಗೊಳ್ಳಲು ವಿನಂತಿಸುತ್ತೇವೆ.

ವರದಿ ಪ್ರಜಾಶಕ್ತಿ…