ಶಿವಮೊಗ್ಗ: ಎಲ್ಲ ಮಕ್ಕಳಿಗೂ ಸಂವಿಧಾನ ವಿಶೇಷ ಹಕ್ಕುಗಳನ್ನು ಒದಗಿಸಿದ್ದು, ವಿಶೇಷವಾದ ಹಕ್ಕುಗಳನ್ನು ಮಕ್ಕಳಿಗಾಗಿ ಸೇರಿಸಲಾಗಿದೆ. ಕಾನೂನು ವ್ಯಾಪ್ತಿಯಲ್ಲಿ ಮಕ್ಕಳಿಗೆ ಸಿಗುವ ಸೌಲಭ್ಯಗಳನ್ನು ಒದಗಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ ಹೇಳಿದರು.

ಶಿವಮೊಗ್ಗ ನಗರದ ನವುಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ ಮಕ್ಕಳ ಹಕ್ಕು ಕಾನೂನು ಅರಿವು ಜಾಗೃತಿ” ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೂ ಶಿಕ್ಷಣ ಪಡೆಯುವ ಹಂತದಲ್ಲೇ ಕಾನೂನು ಹಾಗೂ ಸೌಲಭ್ಯಗಳ ಬಗ್ಗೆ ತಿಳವಳಿಕೆ ಮೂಡಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.
ಸಮಾಜದ ವಿವಿಧ ಭಾಗಗಳಲ್ಲಿ ದಿನ ನಿತ್ಯ ಮಕ್ಕಳ ಮೇಲೆ ಶೋಷಣೆ ಆಗುವುದನ್ನು ನೋಡುತ್ತಿದ್ದೇವೆ. ಮಕ್ಕಳ ಮೇಲಿನ ಶೋಷಣೆ ತಪ್ಪಿಸಲು ಜಾಗೃತಿ ಮುಖ್ಯ. ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರು ಮಕ್ಕಳ ಮೇಲೆ ಶೋಷಣೆ ಆಗದಂತೆ ಸೂಕ್ತ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಮಕ್ಕಳ ಕಾನೂನಿನ ಬಗ್ಗೆ ಎಲ್ಲರು ತಿಳಿದುಕೊಳ್ಳಬೇಕು ಎಂದರು.
ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆಯು ಸಪ್ತಾಹದ ಪ್ರಯುಕ್ತ ವೈವಿಧ್ಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವು ಅತ್ಯಂತ ವಿಶೇಷವಾಗಿದೆ. ಅರ್ಥಪೂರ್ಣ ಜಾಗೃತಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಮಾತನಾಡಿ, ಮಕ್ಕಳ ಬಾಲ್ಯವಿವಾಹ ಆಗದಂತೆ ತಡೆಗಟ್ಟಬೇಕು. ಮಕ್ಕಳ ಸುರಕ್ಷತೆ ಬಗ್ಗೆ ಶಿಕ್ಷಕರು, ಕುಟುಂಬದವರು ಹಾಗೂ ಸ್ನೇಹಿತರು ಅತ್ಯಂತ ಹೆಚ್ಚು ಗಮನ ವಹಿಸಬೇಕು. ಮಕ್ಕಳ ಮೇಲೆ ದೈಹಿಕ ಹಾಗೂ ಮಾನಸಿಕ ದೌರ್ಜನ್ಯ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ಪೋಕ್ಸೋ ಕಾಯ್ದೆಯು ಮಕ್ಕಳಿಗೆ ವಿಶೇಷ ರಕ್ಷಣೆ ನೀಡುತ್ತದೆ. ಮಕ್ಕಳು ಸಾಮಾಜಿಕ ಜಾಲತಾಣ ಬಳಕೆ ಮಾಡುವಾಗ ಪೋಷಕರು ಗಮನಿಸಿ ಎಚ್ಚರಿಕೆ ವಹಿಸಬೇಕು. ಅಪರಿಚಿತರಿಂದ ಮಕ್ಕಳಿಗೆ ತೊಂದರೆ ಮಾಡಿಕೊಳ್ಳದಂತೆ ನೋಡಿಕೊಳ್ಳಬೇಕು. ಬಾಲ್ಯದಿಂದಲೇ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಜೆಸಿಐ ವಲಯ ನಿರ್ದೇಶಕ ಅನೂಶ್ ಗೌಡ, ಸುರೇಂದ್ರ ಕೋಟ್ಯಾನ್, ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ್‌ಕುಮಾರ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಸಂಗೀತಾ, ಮುಖ್ಯಶಿಕ್ಷಕಿ ಅನ್ನಪೂರ್ಣ ಎಲ್.ಆರ್. ಮತ್ತಿತರರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…