ನಮ್ಮ ಸಂವಿಧಾನದ ಪೀಠಿಕೆಗೆ ಅರ್ಥ ಬರುವಂತೆ ನಾವೆಲ್ಲಾ ನಡೆದುಕೊಂಡಾಗ ಸಂವಿಧಾನ ರಚನೆಕಾರರ ಕನಸು ನನಸಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ ಹೇಳಿದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಿಬಿಆರ್ ರಾಷ್ಟ್ರೀಯ ಕಾನೂನು ಕಾಲೇಜು, ಜಿಲ್ಲಾ ನ್ಯಾಯವಾದಿಗಳ ಸಂಘ, ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ದಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಇವರ ಸಹಯೋಗದಲ್ಲಿ ಇಂದು ಕಾನೂನು ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿಗಳ ಅರೆಕಾಲಿಕ ಸ್ವಯಂ ಸೇವಕರಿಗೆ ಏರ್ಪಡಿಸಲಾಗಿದ್ದ ಅಭಿಶಿಕ್ಷಣ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

12 ನೇ ಶತಮಾನದಲ್ಲಿ ಬಸವಣ್ಣನವರು ಅಂದು ಪ್ರಚಲಿತದಲ್ಲಿದ್ದ ಅಸಮಾನತೆಯನ್ನು ನಿರ್ಮೂಲನೆ ಮಾಡಲು ಅನುಭವ ಮಂಟಪವನ್ನು ಸ್ಥಾಪಿಸಿ ಸಮಾಜದಲ್ಲಿ ಸಮಾನತೆ ತರಲು ಸಾಕಷ್ಟು ಪ್ರಯತ್ನ ಪಟ್ಟರು. ವಚನಗಳ ಮೂಲಕ ಮನುಕುಲದ ತಿರುಳನ್ನು ಸಾರುವ ಮೂಲಕ ವಚನ ಕ್ರಾಂತಿ ಮತ್ತು ಸಮಾನತೆ ತರಲು ಕಲ್ಯಾಣ ಕ್ರಾಂತಿ ಮಾಡಿದರು. ಅದೇ ಸಮಾನತೆಯ ಉದ್ದೇಶದಿಂದ ಡಾ.ಬಿ.ಆರ್.ಅಂಬೇಡ್ಕರ್‍ರವರು ಸಾಕಷ್ಟು ಅಧ್ಯಯನ ಮಾಡಿ ನಮ್ಮ ಸಂವಿಧಾನ ರಚಿಸಿದ್ದಾರೆ. ಅದರ ಪೀಠಿಕೆ ಇಡೀ ಸಂವಿಧಾನದ ಧ್ಯೇಯೋದ್ದೇಶ ಮತ್ತು ಆಶೋತ್ತರಗಳನ್ನೆಲ್ಲ ಸವಿಸ್ತಾರವಾಗಿ ತಿಳಿಸುತ್ತದೆ. ಈ ಪೀಠಿಕೆಯಂತೆ ನಾವೆಲ್ಲ ನಡೆದುಕೊಳ್ಳಬೇಕು ಎಂದರು.
ಕಾನೂನಿನ ಮುಂದೆ ಎಲ್ಲರೂ ಸಮಾನರು. ಎಲ್ಲರಿಗೆ ಸಮಾನವಾದ ಕಾನೂನಿನ ನೆರವು ನೀಡಲು ಕಾನೂನು ಸೇವೆಗಳ ಪ್ರಾಧಿಕಾರಗಳ ಸ್ಥಾಪನೆಯಾಗಿದೆ. ದುರ್ಬಲರು, ಹಿಂದುಳಿದವರು, ಮಹಿಳೆಯರು, ಮಕ್ಕಳು ಸೇರಿದಂತೆ ಕಾನೂನಿನ ನೆರವು ಅವಶ್ಯಕತೆ ಇರುವವರಿಗೆ ಉಚಿತ ಕಾನೂನು ನೆರವು ಇಲ್ಲಿ ಲಭ್ಯವಿದೆ. ರಾಜೀ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥಪಡಿಸುವ ವ್ಯವಸ್ಥೆ ಇದೆ. ಇದನ್ನೆಲ್ಲ ಬಳಸಿಕೊಂಡು ತ್ವರಿತ ನ್ಯಾಯ ಪಡೆಯಲು ಎಲ್ಲರೂ ಸಹಕರಿಸಬೇಕು. ಸರ್ಕಾರಿ ಯೋಜನೆಗಳ ಸಮರ್ಪಕ ನಿರ್ವಹಣೆಯಾಗಬೇಕು. ಪ್ರಾಧಿಕಾರದಲ್ಲಿ ಅನೇಕ ಕಾನೂನು ಅರಿವು, ನೆರವು ಕಾರ್ಯಕ್ರಮಗಳಿದ್ದು ಇವು ಯಶಸ್ವಿಯಾಗಲು ಪಿಎಲ್‍ವಿ ಗಳು ಸಹಕರಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿ.ಬಿ.ಆರ್ ರಾಷ್ಟ್ರೀಯ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರೊ.ಜಿ.ಆರ್.ಜಗದೀಶ್ ಮಾತನಾಡಿ, ಪ್ರತಿ ಶ್ರೀಸಾಮಾನ್ಯನಿಗೆ ಕಾನೂನು ಸೇವಕನ ಅವಶ್ಯಕತೆ ಇದ್ದು ಈ ನಿಟ್ಟಿನಲ್ಲಿ ನ್ಯಾಯ ಒದಗಿಸುವಲ್ಲಿ ಕಾನೂನು ವಿದ್ಯಾರ್ಥಿಗಳ ಪಾತ್ರವಿದೆ. ಈ ಸಮಾಜವೇ ಅವರಿಗೆ ಪ್ರಯೋಗಶಾಲೆಯಾದ್ದರಿಂದ ಪ್ರತಿ ಕಾನೂನಿನ ವಿದ್ಯಾರ್ಥಿಗಳು ನಮ್ಮ ಸಂವಿಧಾನ ಮತ್ತು ಮೂಲಭೂತ ಕಾನೂನುಗಳ ಅಧ್ಯಯನ ಮಾಡಿ, ಕಾನೂನಿನ ಅರಿವು ಮತ್ತು ನೆರವು ನೀಡುವಲ್ಲಿ ಪಾಲ್ಗೊಳ್ಳಬೇಕೆಂದರು.
ಈ ದಿಸೆಯಲ್ಲಿ ನಮ್ಮ ಕಾಲೇಜಿನ ವತಿಯಿಂದ 1991 ರಿಂದಲೇ ಹಳ್ಳಿಗಳಲ್ಲಿ ಕಾನೂನು ಅರಿವು ಶಿಬಿರಗಳನ್ನು ಆಯೋಜಿಸುತ್ತಾ ಬಂದಿದ್ದು, ನ್ಯಾಯಾಧೀಶರನ್ನು ಕರೆಯಿಸಿ ಗ್ರಾಮಸ್ಥರ ಪ್ರಶ್ನಾವಳಿಗಳಿಗೆ ಉತ್ತರಿಸಲಾಗಿದೆ. ವಿದ್ಯಾರ್ಥಿಗಳು, ಪಿಎಲ್‍ವಿ(ಪ್ಯಾರಾ ಲೀಗಲ್ ವಾಲಂಟೀಯರ್ಸ್) ಕೇವಲ ನಾಲ್ಕು ಗೋಡೆ ಮಧ್ಯ ಮಾತ್ರವಲ್ಲ, ಹಳ್ಳಿಗಳಲ್ಲಿ ಸೋಷಿಯೋ-ಲೀಗಲ್ ಸರ್ವೇ ಮಾಡಿ, ಜನಸಾಮಾನ್ಯರ ದೈನಿಂದನ ಕಾನೂನಿನ ಸಮಸ್ಯೆಗಳ ಕುರಿತು ತಿಳಿಸುತ್ತಾ ಬಂದಿದ್ದು, ಇದರಿಂದ ಅನುಭವದ ಮುಖೇನ ಕಾನೂನು ತಿಳಿಯಲು ಸಹಕಾರಿಯಾಗಿದೆ ಎಂದರು.

ಕಾನೂನು ಸೇವೆಗಳ ಪ್ರಾಧಿಕಾರ ಜಾರಿಗೆ ಬಂದಾಗಿನಿಂದ ಕಾನೂನಿನ ವಿದ್ಯಾರ್ಥಿಗಳೂ ಸಹ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಕಾನೂನಿನ ಅರಿವು ಮೂಡಿಸುತ್ತಾ ತಾವೂ ಕಲಿಯುತ್ತಿದ್ದಾರೆ. ನಮ್ಮ ನೆಲದ ಕಾನೂನಾದ ಸಂವಿಧಾನವನ್ನು ನಾವೆಲ್ಲರೂ ಉತ್ತಮವಾಗಿ ಜಾರಿಗೊಳಿಸುತ್ತಾ ಸಾಮಾಜಿಕ, ಆರ್ಥಿಕ ಸೇರಿದಂತೆ ಎಲ್ಲ ರೀತಿಯ ಸಮಾನತೆಯನ್ನು ಈ ನೆಲದಲ್ಲಿ ತರಲು ಶ್ರಮಿಸೋಣ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಜಿ.ಶಿವಮೂರ್ತಿ ಮಾತನಾಡಿ, ಎಲ್ಲರಿಗೂ ಕಾನೂನಿನ ಅರಿವು ಮೂಡಿಸಿ ಇದರ ಮಹತ್ವ ತಿಳಿಸುವುದು ಕಾನೂನು ಸೇವಾ ಪ್ರಾಧಿಕಾರದ ಅತ್ಯುನ್ನತ ಉದ್ದೇಶವಾಗಿದೆ. ಕಾನೂನಿನ ಅರಿವಿಲ್ಲದೇ ಸಾಕಷ್ಟು ಜನರು ತಪ್ಪು ಮಾಡಿ ಜೈಲು ಸೇರುತ್ತಿದ್ದಾರೆ. ಇದು ದೇಶದ ಏಳ್ಗೆಗೆ ಮಾರಕವೆಂದರಿತು ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕಾನೂನು ಸೇವಾ ಪ್ರಾಧಿಕಾರಗಳನ್ನು ಸ್ಥಾಪಿಸಿ ಹಳ್ಳಿ ಹಳ್ಳಿಗಳಲ್ಲಿ ಕಾನೂನಿನ ಅರಿವು ಮೂಡಿಸಲಾಗುತ್ತಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆಯಬೇಕೆಂದರು.
ಸಿ.ಬಿ.ಆರ್ ರಾಷ್ಟ್ರೀಯ ಕಾನೂನು ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಬಿ.ಸಿ.ಬಸಪ್ಪ ಹಾಗೂ ಡಾ.ಎ. ಅನಲ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಸಂವಿಧಾನ ಮತ್ತು ಇತರೆ ಕಾನೂನುಗಳ ಕುರಿತು ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್, ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ದಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್‍ನ ನಿರ್ದೇಶಕರು ಹಾಗೂ ವಕೀಲ ಕೆ.ಸಿ ಬಸವರಾಜಪ್ಪ ಪಾಲ್ಗೊಂಡಿದ್ದರು.

ವರದಿ ಪ್ರಜಾಶಕ್ತಿ…