ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಆಗಮಿಸುವ ಸಂದರ್ಭದಲ್ಲಿ ಶಿಷ್ಟಾಚಾರಕ್ಕೆ ಚ್ಯುತಿಯಾಗದಂತೆ ಕಾರ್ಯನಿರ್ವಹಿಸುವಂತೆ ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ ಅವರು ತಿಳಿಸಿದರು.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಶಿಷ್ಟಾಚಾರ ಸಮಿತಿ ಸಭೆಯಲ್ಲಿ ಸಿದ್ಧತೆಗಳ ಕುರಿತು ಸೂಚನೆಗಳನ್ನು ನೀಡಿದರು.
ರಾಜ್ಯಪಾಲರ ಆತಿಥ್ಯ ವ್ಯವಸ್ಥೆ, ಸ್ಥಳೀಯವಾಗಿ ಸಾರಿಗೆ ವ್ಯವಸ್ಥೆ, ಅಂಬ್ಯುಲೆನ್ಸ್, ಅಗ್ನಿಶಾಮಕ ವಾಹನ ಇತ್ಯಾದಿ ವ್ಯವಸ್ಥೆಗಳನ್ನು ಮಾಡಬೇಕು. ವಿಶ್ವವಿದ್ಯಾಲಯದ ವತಿಯಿಂದ ಹಿರಿಯ ಅಧಿಕಾರಿಯನ್ನು ರಾಜ್ಯಪಾಲರ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಬೇಕು.
ಘಟಿಕೋತ್ಸವ ನಡೆಯಲಿರುವ ವೇದಿಕೆಯ ಗುಣಮಟ್ಟವನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ಖಾತ್ರಿಪಡಿಸಬೇಕು. ಎಡೆಹಳ್ಳಿಯಿಂದ ಇರುವಕ್ಕಿಯಲ್ಲಿರುವ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ತೆರಳುವ ರಸ್ತೆ ಹದಗೆಟ್ಟಿದ್ದು, ಅದನ್ನು ದುರಸ್ತಿಪಡಿಸಬೇಕು. ರಾಜ್ಯಪಾಲರ ತಂಗುವಿಕೆ ಅವಧಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗದAತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ವಿಶ್ವವಿದ್ಯಾಲಯದ ಕುಲಪತಿ ಆರ್.ಸಿ.ಜಗದೀಶ್, ಕುಲಸಚಿವ ಡಾ.ಆರ್.ಲೋಕೇಶ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ್.ಟಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.