ಪಕ್ಷ ಮಾಸದ ಪ್ರಯುಕ್ತ ನಗರದ ಬಿ.ಹೆಚ್. ರಸ್ತೆಯ ಶ್ರೀಮಾತಾ ಮಾಂಗಲ್ಯ ಮಂದಿರದಲ್ಲಿ 2 ದಿನಗಳ ಕಾಲ ಆಯೋಜಿಸಲಾಗಿರುವ ಕಾರ್ಯಕ್ರಮವನ್ನು ಖ್ಯಾತ ಪಂಡಿತ, ವಾಗ್ಮಿ ಶ್ರೀ ಆಯನೂರು ಮಧುಸೂದನಾಚಾರ್ಯ ಅವರಿಂದ ನಡೆಯುತ್ತಿರುವ ಗರುಡ ಪುರಾಣ ಎಲ್ಲರಿಗಾಗಿ ಎಂಬ ವಿಶೇಷ ಉಪನ್ಯಾಸ KSSIDC ಯ ಮಾಜಿ ಉಪಾಧ್ಯಕ್ಷರು ಹಾಗೂ ವಿಪ್ರ ಮುಖಂಡರಾದ ಶ್ರೀ ಎಸ್.ದತ್ತಾತ್ರಿ ಉದ್ಘಾಟಿಸಿದರು.
ಅಜೇಯ ಸಂಸ್ಕೃತಿ ಬಳಗ ಆಯೋಜಿಸಿರುವ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ 18 ಪುರಾಣಗಳಲ್ಲಿ ಗರುಡ ಪುರಾಣವು ಕೂಡ ಒಂದು. ಅದೆಷ್ಟೋ ಜನರಲ್ಲಿ ಗರುಡ ಪುರಾಣದ ಕುರಿತು ತರಾವರಿ ಅನುಮಾನಗಳಿವೆ. ಅದನ್ನು ಹೋಗಲಾಡಿಸುವುದಕ್ಕಾಗಿಯೇ ಈ ಕಾರ್ಯಕ್ರಮ,
ಹಿಂದೂ ಧರ್ಮದಲ್ಲಿ ಗರುಡ ಪುರಾಣಕ್ಕೆ ವಿಶೇಷ ಮಹತ್ವವಿದೆ. ಇದು ಒಂದು ಮಹಾಪುರಾಣ. ಇದು ಸಾವಿನ ನಂತರ ಮೋಕ್ಷವನ್ನು ನೀಡುವ ಪುಸ್ತಕ. ಅದಕ್ಕಾಗಿಯೇ ಸನಾತನ ಧರ್ಮದಲ್ಲಿ ಸಾವಿನ ನಂತರ ಗರುಡ ಪುರಾಣವನ್ನು ಕೇಳಲು ಅವಕಾಶವನ್ನು ನೀಡಲಾಗಿದೆ. ಹದಿನೆಂಟು ಪುರಾಣಗಳಲ್ಲಿ ಗರುಡ ಪುರಾಣಕ್ಕೆ ತನ್ನದೇ ಆದ ಮಹತ್ವವಿದೆ ಎಂದರು.
ಕ್ರಮವಾಗಿ ಮನುಷ್ಯನ ಜನನ, ಜೀವನ, ಮರಣ, ಹಾಗು ಮರಣದ ನಂತರದ ಬಗೆಗಿನ ಹಲವಾರು ಮಾಹಿತಿಗಳನ್ನು ಕೊಡುವ ಏಕೈಕ ಹೊತ್ತಿಗೆಯೇ ಗರುಡ ಪುರಾಣ.
ಇದು ನಮ್ಮ ಬದುಕಿನ ರೀತಿ ನೀತಿಗಳನ್ನ ನಿರ್ಧರಿಸುವುದಕ್ಕೆ, ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನ ಆಲೋಚಿಸುವುದಕ್ಕೆ ಹಾಗೂ ನಾವು ಸರಿದಾರಿಯಲ್ಲಿ ಸಾಗುವುದಕ್ಕೆ ಬೇಕಾದ ಅನೇಕ ನಿಯಮ, ಸಂಯಮಗಳನ್ನ ಈ ಗರುಡ ಪುರಾಣ ಮಾರ್ಗದರ್ಶನ ಮಾಡುತ್ತದೆ ಎಂದರು.
ಮಾನವ ಪಾಪ ಪುಣ್ಯ, ಒಳಿತು ಕೆಡುಕುಗಳನ್ನು ವಿಮರ್ಶಿಸಿ ಧರ್ಮ ಮಾರ್ಗದಲ್ಲಿ ನಡೆಯಲು ಪುರಾಣ ಗ್ರಂಥಗಳು ಸಹಕರಿಸುತ್ತವೆ. ಹಾಗಾಗಿ ಈ ವಿಶೇಷವಾದ ಗರುಡ ಪುರಾಣದ ವಿಚಾರಗಳ ಬಗ್ಗೆ ನಾವೆಲ್ಲರೂ ಅರಿಯಬೇಕು. ಅಷ್ಟೇ ಅಲ್ಲದೇ ನಮ್ಮ ಮುಂದಿನ ಪೀಳಿಗೆಗೂ ಇದರ ಮಹತ್ವವನ್ನು ತಿಳಿಸಿ, ದಿನನಿತ್ಯದ ಕರ್ಮಾನುಷ್ಠಾನದಲ್ಲಿ ಜಾರಿಗೆ ಬರುವಂತೆ ನೋಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಶ್ರೀ ನಟರಾಜ ಭಾಗವತ್, ಅಜೇಯ ಸಂಸ್ಕೃತಿ ಬಳಗದ ಅಧ್ಯಕ್ಷರಾದ ಶ್ರೀ ಜೆ. ರಾಮಾಚಾರ್ ಹಾಗೂ ಗೌರವಾಧ್ಯಕ್ಷರಾದ ಶ್ರೀ ನಾಗರಾಜ್ ರವರು ಸೇರಿದಂತೆ ಇದರ ಪ್ರಮುಖರು ಉಪಸ್ಥಿತರಿದ್ದರು.