ಶಿವಮೊಗ್ಗ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಹಾಗೂ ಪ್ರಣಾಳಿಕೆ, ನೀತಿ ಮತ್ತು ದೂರದೃಷ್ಠಿ ಸಮಿತಿ 2023ರ ಉಪಾಧ್ಯಕ್ಷ ಹಾಗೂ ನೂತನವಾಗಿ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಆಧ್ಯಕ್ಷರಾಗಿ ಆಯ್ಕೆಯಾದ ಮಧು ಬಂಗಾರಪ್ಪ ಇಂದು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.

ನಗರದ ಎಂ.ಆರ್.ಎಸ್. ವೃತ್ತದಿಂದ ಬೈಕ್ ರ್ಯಾಲಿ ಮೂಲಕ ಜಿಲ್ಲಾ ಕಾಂಗ್ರೆಸ್ ಕಚೇರಿಯವರೆಗೆ ಕರೆತರಲಾಯಿತು. ನಂತರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಹೆಚ್.ಎಂ. ರೇವಣ್ಣ ಮಾತನಾಡಿ, ಇಂದಿನ ಅದ್ಧೂರಿ ಸ್ವಾಗತ ನೋಡಿದರೆ ಶಿವಮೊಗ್ಗದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತೆ ಎಲ್ಲಾ ಸ್ಥಾನಗಳನ್ನು ಗೆಲ್ಲುವುದು ಖಚಿತ ಎಂಬ ಭಾವನೆ ಬಂದಿದೆ ಎಂದರು.
ಶಿವಮೊಗ್ಗ ಜಿಲ್ಲೆ ಸಮಾಜವಾದಿ ನೆಲೆಯಾಗಿದ್ದು, ರಾಜಕೀಯ ದಿಗ್ಗಜರನ್ನು ನೀಡಿದ ಜಿಲ್ಲೆಯಾಗಿದೆ. ಸಾಮಾಜಿಕ ನ್ಯಾಯದ ಕಳಕಳಿ ಇದ್ದ ಹಾಗೂ ಹೋರಾಟಕ್ಕೆ ಒತ್ತು ಕೊಟ್ಟ ಜಿಲ್ಲೆಯಾಗಿದ್ದು, ಜನರ ಮನಸ್ಸಿನಲ್ಲಿ ಕಾಂಗ್ರೆಸ್ ಇನ್ನೂ ಗಟ್ಟಿಯಾಗಿ ಉಳಿದಿದೆ ಎಂದರು.

ನಾನು ಭಾರತ್ ಜೋಡೋ ಯಾತ್ರೆಯ ಶಿವಮೊಗ್ಗ ಜಿಲ್ಲಾ ಉಸ್ತುವಾರಿಯಾಗಿದ್ದೇನೆ. ಶಿವಮೊಗ್ಗ ರಾಜ್ಯದಲ್ಲಿ ರಾಜಕೀಯ ಕೇಂದ್ರ ಸ್ಥಾನ ಎಂದರೆ ತಪ್ಪಾಗಲಾರದು. ಭಾರಿ ಭ್ರಷ್ಟಾಚಾರ ಮತ್ತು ಹಗರಣಗಳ ಸರ್ಕಾರವಾದ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಪುನಃ ಕಾಂಗ್ರೆಸ್ ಅನ್ನು ಜಿಲ್ಲೆಯಲ್ಲಿ ಪ್ರಬಲವಾಗಿ ಸಂಘಟಿಸಬೇಕಿದೆ.ಇವತ್ತಿನ ಉತ್ಸಾಹ ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಕಾರ್ಯಕರ್ತರಲ್ಲೂ ಹೊಸ ಚೈತನ್ಯ ತರಲಿ. ಮಧು ಬಂಗಾರಪ್ಪ ಅವರಿಗೆ ರಾಜ್ಯಾದ್ಯಂತ ವರ್ಚಸ್ಸು ಇದೆ. ಅದನ್ನು ಗಮನಿಸಿದ ಹೈಕಮಾಂಡ್ ಅವರಿಗೆ ಮಹತ್ತರ ಜವಾಬ್ದಾರಿ ನೀಡಿದೆ. ಅವರ ಕಾರ್ಯಕ್ಷೇತ್ರ ಶಿವಮೊಗ್ಗ ಜಿಲ್ಲೆಗೆ ಸೀಮಿತವಾಗದೇ ರಾಜ್ಯದೆಲ್ಲೆಡೆ ವಿಸ್ತರಿಸಲಿ. ಅರಸು ಮತ್ತು ಇಂದಿರಾಗಾಂಧಿಯ ಕಲ್ಪನೆಯಾಗಿದ್ದ ಎಲ್ಲರಿಗೂ ಸಮ ಬಾಳು ಸಮ ಪಾಲು ಎಂಬುದನ್ನು ಜನರಿಗೆ ಮನದಟ್ಟು ಮಾಡುವಂತಾಗಲಿ ಎಂದರು.

ಪ್ರಧಾನಿ ಮೋದಿ ಕಳೆದ ಬಾರಿ ಚುನಾವಣಾ ಪ್ರಚಾರಕ್ಕೆ ಬಂದಾಗ ಸಿದ್ಧರಾಮಯ್ಯ ಅವರ ಸರ್ಕಾರ 10 ಪರ್ಸೆಂಟ್ ಸರ್ಕಾರ ಎಂದು ಲೇವಡಿ ಮಾಡಿದ್ದರು. ಈಗಿರುವ ಬಿಜೆಪಿ ಸರ್ಕಾರ 40 ಪರ್ಸೆಂಟ್ ಸರ್ಕಾರ ಎಂಬುದು ಸಾಬೀತಾಗಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಸಾಕ್ಷಿ ಸಮೇತ ಆರೋಪಿಸಿದ್ದಾರೆ. ಅಕ್ರಮದ ದಾಖಲೆ ಕೇಳಿದವರಿಗೆ ಈಶ್ವರಪ್ಪನವರೊಬ್ಬರೇ ಸಾಕ್ಷಿ ಸಾಕು. ಅವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದರು.
ಪಿಎಸ್ಐ ಅಕ್ರಮ ನಡೆದಿಲ್ಲ ಎಂದು ವಾದಿಸಿದ ಆರಗ ಜ್ಞಾನೇಂದ್ರ ಆಮೇಲೆ ಅವರದೇ ಸರ್ಕಾರದ ಹಿರಿಯ ಅಧಿಕಾರಿ ಸಸ್ಪೆಂಡ್ ಆಗಬೇಕಾಯಿತು. ಅನೇಕ ಕಿಂಗ್ ಪಿನ್ ಗಳು ಈಗ ಜೈಲು ಪಾಲಾಗಿದ್ದಾರೆ. ಹಗರಣವೇ ನಡೆದಿಲ್ಲ ಎಂದವರು ಈಗ ನಗೆಪಾಟಲೀಗೀಡಾಗಿದ್ದಾರೆ. ಹಗರಣಗಳ ಸರಮಾಲೆಯ ಸರ್ಕಾರವಿದು. ವಿಷಯಾಂತರ ಮಾಡುವುದರಲ್ಲಿ ಬಿಜೆಪಿಯವರು ಸಿದ್ಧಹಸ್ತರು ಎಂದರು.

ಕನ್ಯಾ ಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ 3600 ಕಿ.ಮೀ. ಭಾರತ್ ಜೋಡೋ ಯಾತ್ರೆ ಹಮ್ಮಿಕೊಂಡಿದೆ. ದೇಶದಲ್ಲಿನ ಆರ್ಥಿಕ ಅಸಮಾನತೆ, ಸಾಮಾಜಿಕ ಅಸಮಾನತೆಯಿಂದ ಮುಕ್ತಿ ಪಡೆಯಲು, ರಾಜಕೀಯ ಉದ್ವಿಗ್ನತೆ ಸರಿಪಡಿಸುವ ಉದ್ದೇಶವಿದೆ. ಸೆ. 26, 27 ರಂದು ಶಿವಮೊಗ್ಗದಲ್ಲಿ ಭಾರತ್ ಜೋಡೋ ಯಾತ್ರೆಯ ಪೂರ್ವ ಭಾವಿ ಸಭೆ ನಡೆಯಲಿದೆ ಎಂದರು.
ಶಿವಮೊಗ್ಗ ಜಿಲ್ಲೆಗೆ ಯಾತ್ರೆ ಬರುವುದಿಲ್ಲ. ಪಕ್ಕದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಹಿರಿಯೂರು ಮಾರ್ಗದಲ್ಲಿ ಯಾತ್ರೆ ಸಾಗಲಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ವೇದಿಕೆಯಲ್ಲಿರುವ ಎಲ್ಲರೂ ‘ಪೇ ಸಿಎಂ’ ಕರಪತ್ರ ತೋರಿಸುವ ಮೂಲಕ ಬಿಜೆಪಿ ಸರ್ಕಾರದ ಅಣಕು ಮಾಡಿದರು. ಕರಪತ್ರದಲ್ಲಿರುವ ನಂಬರ್ ಗೆ ಮಿಸ್ಡ್ ಕಾಲ್ ಕೊಡುವಂತೆ ಪ್ರತಿ ಕ್ಷೇತ್ರದಿಂದ ವಾರಕ್ಕೆ ಕನಿಷ್ಠ 10 ಸಾವಿರ ಕಾಲ್ ಮಾಡಿ ಸರ್ಕಾರಕ್ಕೆ ಎಚ್ಚರಿಸುವಂತೆ ಕಾರ್ಯಕರ್ತರಲ್ಲಿ ವಿನಂತಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್, ಶಿವಮೂರ್ತಿ ನಾಯ್ಕ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್, ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಆರ್. ಪ್ರಸನ್ನಕುಮಾರ್, ಕೆ.ಬಿ. ಪ್ರಸನ್ನಕುಮಾರ್, ರಮೇಶ್ ಶಂಕರಘಟ್ಟ, ವೈ.ಹೆಚ್. ನಾಗರಾಜ್, ಇಕ್ಕೇರಿ ರಮೇಶ್, ಡಾ. ರಾಜನಂದಿನಿ ಕಾಗೋಡು ತಿಮ್ಮಪ್ಪ, ಚಂದ್ರಭೂಪಾಲ್, ಜಿ.ಡಿ. ಮಂಜುನಾಥ್, ಪ್ರವೀಣ್ ಕುಮಾರ್, ವಿಜಯ್ ಕುಮಾರ್ , ಮೋಹನ್ ಕುಮಾರ್ ದೇವೇಂದ್ರಪ್ಪ , ಚಂದ್ರಶೇಖರ್ ಮೊದಲಾದವರಿದ್ದರು.

ವರದಿ ಪ್ರಜಾಶಕ್ತಿ…