ರಾಘವೇಂದ್ರರಿಗೆ ಮಲೆನಾಡು ಸಿಂಹ ಬಿರುದು ಘೋಷಣೆ
ಶಿವಮೊಗ್ಗ:- ನಗರದ ವಾಜಪೇಯಿ ಬಡಾವಣೆಯ ಮುಖ್ಯರಸ್ತೆಯಲ್ಲಿ ನಿರ್ಮಾಣ ಗೊಳ್ಳಲಿರುವ ವಿಶ್ವಕರ್ಮ ಕರಕುಶಲ ಕೌಶಲ್ಯ ಕೇಂದ್ರ ಭವನಕ್ಕೆ 50 ಲಕ್ಷ ರೂ. ಅನುದಾನ ನೀಡುವುದಾಗಿ ಸಂಸದ ರಾಘವೇಂದ್ರ ಬಿ.ವೈ.ಘೋಷಿಸಿದರು.

ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ವಿಶ್ವಕರ್ಮ ಸೌಹಾರ್ದ ಸಹಕಾರಿಯ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ವಿಶ್ವಕರ್ಮರು ವಿಶ್ವದಲ್ಲೇ ಪ್ರಸಿದ್ಧರು. ಹಳೆಬೀಡು, ಬೇಲೂರು, ಹಂಪೆ ಜೊತೆ ಜೊತೆಗೆ ದೇಶದ ಎಲ್ಲೆಡೆ ನಿರ್ಮಾಣವಾಗಿರುವ ಅದ್ಭುತ ದೇವಾಲಯಗಳ ನಿರ್ಮಾಣದಲ್ಲಿ ವಿಶ್ವಕರ್ಮ ಶಿಲ್ಪಿಗಳ ಪಾತ್ರ ಹಾಗೂ ಕೊಡುಗೆ ಅಪಾರ ಎಂದರು.
ಕಲಾ ಕೆತ್ತನೆಗಳು, ಕುಶಲ ಕಲೆಗಳು, ಚಿನ್ನ-ಬೆಳ್ಳಿ ಹಾಗೂ ನೇಗಿಲ ಶಿಲ್ಪಿಗಳು ವಿಶ್ವಕರ್ಮರಾಗಿದ್ದಾರೆ. ದೇಶದ ಪ್ರಧಾನಿ ಮೋದಿಯವರು ಸಹ ವಿಶ್ವಕರ್ಮರ ಕಲೆಯನ್ನು ಕೊಂಡಾಡಿದ್ದಾರೆಂದು ಸ್ಮರಿಸಿದರು.
ಶಿವಮೊಗ್ಗದಲ್ಲಿ ನಿರ್ಮಾಣ ಗೊಳ್ಳಲಿರುವ ವಿಶ್ವಕರ್ಮ ಕರಕುಶಲ ತರಬೇತಿ ಭವನದಲ್ಲಿ ವಿಶ್ವಕರ್ಮರ ವಿವಿಧ ಕಲೆಗಳ ಬಗ್ಗೆ ಉಚಿತ ತರಬೇತಿ ನೀಡುವ ನಿರ್ಧಾರ ನಿಜಕ್ಕೂ ಅನುಕರಣೀಯ ಎಂದರು.

ಅತಿಥಿಗಳಾಗಿ ಸೂಡಾ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಮಾಜಿ ನಗರಸಭಾ ಅಧ್ಯಕ್ಷ ಎನ್.ಜೆ. ರಾಜಶೇಖರ್, ಪತ್ರಿಕೋದ್ಯಮದಲ್ಲಿ ಜರ್ನಲಿಸಂ ಪದವಿ ಪಡೆದ ದಾನಿಗಳೂ ಆದ ಪರಮೇಶ್ವರ್ ಬಿದರೆ ಪಾಲ್ಗೊಂಡಿದ್ದು, ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಎಸ್. ಚಂದ್ರಕಾಂತ್ ಮಾತನಾಡಿ, ಶಿವಮೊಗ್ಗ ಹಾಗೂ ನಾಡಿನ ಇತಿಹಾಸದಲ್ಲಿಯೇ ಸಂಸದ ಬಿ.ವೈ. ರಾಘವೇಂದ್ರ ಅಭಿವೃದ್ಧಿ ಕಾರ್ಯದಲ್ಲಿ ಮುಂಚೂಣಿ ಸ್ಥಾನ ಪಡೆದಿದ್ದಾರೆ. ಒಬ್ಬ ಎಂಪಿ ಏನೆಲ್ಲವನ್ನೂ ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹಾಗಾಗಿ ಇವರು ಎಂದೆಂದಿಗೂ ಜನಮನದಲ್ಲಿ ಚಿರಸ್ಥಾಯಿಯಾಗಿ ನಿಲ್ಲುತ್ತಾರೆಂದರು.
ಬಿ.ವೈ. ರಾಘವೇಂದ್ರ ಅವರಿಗೆ ಮಲೆನಾಡು ಸಿಂಹ ಬಿರುದು ಘೋಷಿಸಿದ ಚಂದ್ರಕಾಂತ್ ಅವರು, ಶೀಘ್ರದಲ್ಲೇ ಅವರ ಮನೆ ಬಾಗಿಲಲ್ಲಿ ಅವರಿಗೆ ಈ ಬಿರುದನ್ನು ಪ್ರದಾನ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬಿವೈಆರ್ ಅವರು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನೆರವೇರಿಸಿಕೊಟ್ಟರು.
ಉಪಾಧ್ಯಕ್ಷ ಶಿವಕುಮಾರಾಚಾರ್, ಗೌರವ ಕಾರ್ಯದರ್ಶಿ ಕೆ. ಈಶ್ವರಾಚಾರ್, ನಿರ್ದೇಶಕರಾದ ಪಿ. ಶ್ರೀನಿವಾಸ್, ಬಿ. ಸುರೇಶ್, ಸಿ.ಅನಿಲ್ ಕುಮಾರ್, ಸುರೇಶ್ ಬಾಬು, ಶಶಿ ಮಂಗಳಾಗಾರ್, ಓಂಗಣೇಶ್ ಶೇಟ್, ಲೋಲಾಕ್ಷಿ ಜಕಣಾಚಾರ್, ಹೆಚ್.ಎಸ್. ನಾಗರಾಜ್, ಸತ್ಯನಾರಾಯಣ್, ಇಂದಿರಾ, ಗುರುದೀಪ್ , ಪ್ರಭಾರ ಸಿಇಓ ವಸಂತ ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…