ಶಿವಮೊಗ್ಗ ನಗರದ ಕೋಟೆ ಶ್ರೀ ಚಂಡಿಕಾದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ಶಿವಮೊಗ್ಗ ದಸರಾ ಮಹೋತ್ಸವವನು ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಉದ್ಘಾಟಿಸಿದರು.
ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಮಾತನಾಡಿ ನನಗೆ ದೇವಿ ವಿಗ್ರಹ ನೋಡಿ ತುಂಬಾ ಸಂತೋಷವಾಗಿದೆ. ಆ ಚಾಮುಂಡೇಶ್ವರಿ ನಾಡಿನ ಜನತೆಗೆ ಸಕಲ ಸೌಭಾಗ್ಯ ಕೊಡಲಿ ಎಂದು ಹಾರೈಸಿದರು.
ಶಾಸಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ರಾಜ್ಯದಲ್ಲಿ ಮೈಸೂರು ಬಿಟ್ಟರೆ ಶಿವಮೊಗ್ಗ ದಸರಾ ಅತ್ಯಂತ ಸಂಭ್ರಮದ ದಸರಾ ಆಗಿದೆ. ಈ ಬಾರಿ ಶಿವಮೊಗ್ಗ ಮಹಾನಗರ ಪಾಲಿಕೆಗೆ ಸ್ವಚ್ಛ ಶಿವಮೊಗ್ಗ ಎಂಬ ಪ್ರಶಸ್ತಿ ರಾಷ್ಟ್ರಪತಿಗಳ ಮುಖಾಂತರ ದೇಶದಲ್ಲೇ ಮೊದಲನೇ ಸ್ಥಾನಕ್ಕೆ ಪಾಲಿಕೆಗೆ ಕೊಡುತ್ತಿರುವುದು ದಸರಾದ ಮೆರಗಿಗಿ ಇನ್ನೊಂದು ಗರಿ ಸೇರಿದಂತಾಗಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ ಎಂದರು.
ಅಸುರೀ ಶಕ್ತಿಗಳ ನಾಶಕ್ಕಾಗಿ ಭಾರತೀಯರಿಗೆ ಎಲ್ಲದರಲ್ಲೂ ವಿಜಯ ಸಿಗಲಿ ಎಂದು ನವರಾತ್ರಿಯಲ್ಲಿ ನವದುರ್ಗೆ ಪೂಜಿಸಿ ವಿಜದಶಮಿ ಆಚರಿಸುತ್ತೇವೆ. ಹಿಂದಿನಿಂದಲೂ ದೇಶದಲ್ಲಿ ಪರಕೀಯ ಶಕ್ತಿಗಳು ತೊಂದರೆ ಕೊಡುತ್ತಾ ಬಂದಿವೆ. ಆಗ ಎಲ್ಲಾ ಸಂದರ್ಭಗಳಲ್ಲೂ ನಮ್ಮ ದೇಶ ಭಕ್ತ ಭಾರತೀಯರು ಅವರನ್ನು ಎದುರಿಸಿ ಗೆದ್ದಿದ್ದಾರೆ. ಈಗ ಮತ್ತೆ ದೇಶ ವಿದ್ರೋಹಿಗಳು ಅಲ್ಲಲ್ಲಿ ದೇಶದ್ರೋಹ ಚಟುವಟಿಕೆ ನಡೆಸುತ್ತಿದ್ದಾರೆ. ರಾಷ್ಟ್ರದ್ರೋಹಿ ಶಕ್ತಿಗಳ ಆಟ ಇನ್ನುಮುಂದೆ ನಡೆಯುವುದಿಲ್ಲ. ನಾವೆಲ್ಲಾ ಚಾಮುಂಡೇಶ್ವರಿ ಮುಂದೆ ದೇಶ ರಕ್ಷಣೆಯ ಶಪಥ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಮೇಯರ್ ಸುನಿತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ಪಾಲಿಕೆ ವಿಪಕ್ಷ ನಾಯಕಿ ರೇಖಾ ರಂಗನಾಥ್, ಪಾಲಿಕೆ ಸದಸ್ಯರಾದ ಚನ್ನಬಸಪ್ಪ, ಯಮುನಾ ರಂಗೇಗೌಡ, ವಿಶ್ವನಾಥ್, ಜ್ಞಾನೇಶ್ವರ್, ಹೆಚ್.ಸಿ. ಯೋಗೀಶ್, ಕಲ್ಪನಾ ರಮೇಶ್, ಅನಿತಾ ರವಿಶಂಕರ್, ಮಂಜುನಾಥ್, ವಿಶ್ವಾಸ್, ಶಿವಕುಮಾರ್, ರಾಜು, ಮಂಜುಳಾ ಶಿವಣ್ಣ, ಲಕ್ಷ್ಮಿ ಶಂಕರನಾಯ್ಕ್, ಸುರೇಖಾ ಮುರಳೀಧರ್, ಸಂಗೀತಾ ನಾಗರಾಜ್, ಶಿರೀಶ್, ಸೂಡಾ ಅಧ್ಯಕ್ಷ ನಾಗರಾಜ್, ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಮಾರಪ್ಪ, ಕಾರ್ಯದರ್ಶಿ ಗೋವಿಂದ ಮುಂತಾದವರು ಉಪಸ್ಥಿತರಿದ್ದರು.