ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಶ್ರೀ ಎಸ್.ಎಸ್. ಜ್ಯೋತಿಪ್ರಕಾಶ್ ಅವರ ವಿಶೇಷ ಕಾಳಜಿ, ನಿರಂತರ ಸಂಪರ್ಕ, ಸತತ ಪರಿಶ್ರಮ ಹಾಗೂ ಸ್ಥಳೀಯ ರೈತರ ಮನವೊಲಿಕೆಯ ಫಲವಾಗಿ ಸುಮಾರು 60 ಎಕರೆ ವಿಸ್ತೀರ್ಣದಲ್ಲಿ ಸುಮಾರು ರೂ. 35 ಕೋಟಿ ವೆಚ್ಚದಲ್ಲಿ ನಗರದ ಜನತೆಗೆ ಅತ್ಯಾಧುನಿಕ ವ್ಯವಸ್ಥೆಯುಳ್ಳ ಸುಸಜ್ಜಿತ ನೂತನ ಬಡಾವಣೆ ನಿರ್ಮಾಣಕ್ಕೆ ಶಿವಮೊಗ್ಗದ ಬೈಪಾಸ್ ಬಳಿ ಇರುವ ಊರುಗಡುರು ಭಾಗದಲ್ಲಿ ಅಡಿಗಲ್ಲು ಹಾಕಲಾಗಿತ್ತು.

ಈ ಒಂದು ಅತ್ಯಾಧುನಿಕ ಮೂಲಭೂತ ಸೌಕರ್ಯವುಳ್ಳ ಸುಸಜ್ಜಿತ ನೂತನ ಬಡಾವಣೆ ನಿರ್ಮಾಣ ಮಾಡಲು ಜಮೀನು ನೀಡಿದ ರೈತರಿಗೆ ಸರ್ಕಾರದದಿಂದ ಬರಬೇಕಾದ ಬಾಕಿ ಪರಿಹಾರ ಮೊತ್ತ ಬಿಡುಗಡೆಗೊಳಿಸುವ ಕುರಿತು ಹಾಗೂ ಇನ್ನಿತರೆ ಹಲವಾರು ಪ್ರಮುಖ ಸಮಸ್ಯೆಗಳನ್ನು ಸಮರ್ಪಕವಾಗಿ ಚರ್ಚಿಸಲು ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪ ಅವರನ್ನು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸೂಡಾದ ಮಾಜಿ ಅಧ್ಯಕ್ಷರಾದ ಶ್ರೀ ಎಸ್.ಎಸ್. ಜ್ಯೋತಿಪ್ರಕಾಶ್ ಅವರ ನೇತೃತ್ವದಲ್ಲಿ ರೈತ ಶ್ರೀ ರಮೇಶ್ ಅವರ ನಿಯೋಗ ಇಂದು ಭೇಟಿ ಮಾಡಿ ಮಾತುಕತೆ ನಡೆಸಿ, ಪರಿಹಾರ ಹಣ ಬಿಡುಗಡೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು, ನಗರದ ಅಭಿವೃದ್ಧಿ ಕೆಲಸಗಳಿಗೆ ಕೈ ಜೋಡಿಸುವ ಸದುದ್ದೇಶದಿಂದ ಭೂಮಿ ನೀಡಿ ಸಹಕರಿಸಿದ ಸ್ಥಳೀಯ ರೈತರಿಗೆ ಸರ್ಕಾರದಿಂದ ಬರಬೇಕಿರುವ ಪರಿಹಾರ ಮೊತ್ತ ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ತಕ್ಷಣವೇ ಮಾನ್ಯ ಮುಖ್ಯಮಂತ್ರಿ ಗಳೊಂದಿಗೆ ಮಾತುಕತೆ ನಡೆಸಿ ಶೀಘ್ರವೇ ಹಣ ಬಿಡುಗಡೆಗೆ ಕ್ರಮವಹಿಸುತ್ತೇನೆ ಎಂದು ನಿಯೋಗಕ್ಕೆ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಭೂಮಿ ನೀಡಿದ ರೈತರಿಗೆ ವಿಶೇಷ ಧನ್ಯವಾದ ತಿಳಿಸಿದರು.

ಈ ಸಂದರ್ಭದಲ್ಲಿ ರೈತರಾದ ರಮೇಶ್ ಅವರು, ಲಿಯಾಕತ್ ಅವರು, ಕಣ್ಣಪ್ಪ ಅವರು, ಗೌಸ್ ಅವರು, ಭೀಮಣ್ಣ ಅವರು, ನೌಷಾದ್ ಅವರು ಜೊತೆಗಿದ್ದರು.

ವರದಿ ಪ್ರಜಾಶಕ್ತಿ…