ಶಿವಮೊಗ್ಗ: ಕರೋನಾ ಪ್ರತಿಯೊಬ್ಬರ ಜೀವನ ಹಾಗೂ ಸಾಮಾಜಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರಿತ್ತು. ಇದರ ಜತೆಯಲ್ಲಿ ಶೈಕ್ಷಣಿಕ ವ್ಯವಸ್ಥೆಯಲ್ಲೂ ಅನೇಕ ಬದಲಾವಣೆಗೆ ಕರೋನಾ ಕಾರಣವಾಯಿತು ಎಂದು ಸಂಪನ್ಮೂಲ ವ್ಯಕ್ತಿ ಹಸನ್ ಬೆಳ್ಳಿಗನೂಡು ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಕರೋನಾ ನಂತರ ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರದ ಮುಂದೆ ಇರುವ ಸವಾಲು ಹಾಗೂ ಕೈಗೊಂಡ ಯೋಜನೆಗಳು” ವಿಷಯ ಕುರಿತು ಉಪನ್ಯಾಸ ನೀಡಿ, ಕರೊನಾ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವು ಅತ್ಯಂತ ಕಷ್ಟಕರವಾಗಿತ್ತು. ವಿದ್ಯಾರ್ಥಿಗಳ ಶೈಕ್ಷಣಿಕ ಹಿನ್ನಡೆಗೆ ಕಾರಣವಾಯಿತು. ಶೈಕ್ಷಣಿಕ ಪ್ರಗತಿಗೆ ಕರೋನಾ ಅಡ್ಡಿಯಾಯಿತು ಎಂದು ತಿಳಿಸಿದರು.
ಕರೊನಾ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರ ಎದುರಿಸಿದ ಸವಾಲುಗಳು ಅನೇಕ. ಹಳ್ಳಿಯಿಂದ ಪಟ್ಟಣಗಳವರೆಗೂ ಶಿಕ್ಷಕರು ಮಕ್ಕಳ ಮನೆಬಾಗಿಲಲ್ಲಿ ಶಿಕ್ಷಣ ನೀಡಬೇಕಾಯಿತು. ಸರ್ಕಾರ ಸೂಚಿಸಿದಂತೆ ವಿದ್ಯಾಗಮ ಯೋಜನೆ ಮುಖಾಂತರ ಶಿಕ್ಷಕರು ಮಕ್ಕಳಿಗೆ ಪಾಠ ಮಾಡಬೇಕಾಯಿತು. ಆನ್‌ಲೈನ್ ತರಗತಿ, ವಿದ್ಯಾಗಮ ಹಾಗೂ ವಠಾರ ಶಾಲೆ ಮುಖಾಂತರ ಮಕ್ಕಳ ಭೇಟಿ ಮಾಡಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಯಿತು ಎಂದರು.

ಮೂರು ವರ್ಷಗಳ ಕಲಿಕೆಯ ಹಿನ್ನಡೆ ಸುಧಾರಿಸಲು ಸರ್ಕಾರವು 2022-23ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಚೇತರಿಕೆ ಎಂಬ ವಿನೂತನ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದಿದೆ. ಇದರಲ್ಲಿ ಪ್ರತಿಯೊಂದು ವಿಷಯಕ್ಕೂ ಸಂಬAಧಿಸಿದAತೆ ಸರಳವಾದ ಕಲಿಕಾ ಚೇತರಿಕೆ ಕ್ರಮಗಳನ್ನು ತಂದಿದೆ. ವಿದ್ಯಾರ್ಥಿಗಳ ಕಲಿಕೆಯಲ್ಲಿ ಗಣನೀಯವಾದ ಬದಲಾವಣೆ ಆಗಿದೆ ಎಂದು ಹೇಳಿದರು.
ರೋಟರಿ ಸಂಸ್ಥೆಯು ದಶಕಗಳಿಂದಲೂ ಶೈಕ್ಷಣಕ ಗುಣಮಟ್ಟ ಹೆಚ್ಚಿಸಲು ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವ ಮಹತ್ತರ ಕಾರ್ಯವನ್ನು ನಡೆಸುತ್ತಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸೇವಾ ಕಾರ್ಯಗಳನ್ನು ಅನುಷ್ಠಾನಗೊಳಿಸುತ್ತಿರುವುದು ಅಭಿನಂದನೀಯ ಎಂದರು.

ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆಯು ಸಾವಿರಾರು ಟ್ಯಾಬ್‌ಗಳನ್ನು ಸರ್ಕಾರಿ ಶಾಲೆ ಮಕ್ಕಳಿಗೆ ನೀಡಿದೆ. ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಬ್ಯಾಗ್, ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದೆ. ಸ್ವಯಂ ಸೇವಾ ಶಿಕ್ಷಕರ ಮೂಲಕ ಪಠ್ಯ ಬೋಧಿಸುತ್ತಿದೆ. ಸರ್ಕಾರದ ಜತೆಯಲ್ಲಿ ರೋಟರಿ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕೆ.ಕುಮಾರಸ್ವಾಮಿ, ಸಹಾಯಕ ಮಾಜಿ ಗವರ್ನರ್ ಜಿ.ವಿಜಯ್‌ಕುಮಾರ್, ಮಂಜುನಾಥ ಕದಂ, ವಸಂತ್ ಹೋಬಳಿದಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…