ಶಿವಮೊಗ್ಗ: ಸೊಳ್ಳೆ ಸಂತಾನೋತ್ಪತ್ತಿ ತಾಣಗಳ ನಿರ್ಮೂಲನೆಯಿಂದ ಮಾತ್ರ ಡೆಂಗ್ಯೂ ಹಾಗೂ ಚಿಕೂನ್ ಗುನ್ಯ ಕಾಯಿಲೆಗಳ ನಿಯಂತ್ರಣ ಸಾಧ್ಯ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ ಹೇಳಿದರು.

ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಸೊಳ್ಳೆಗಳಿಂದ ಹರಡುವ ರೋಗಗಳನ್ನು ನಿರ್ಲಕ್ಷಿಸಿದರೆ ಮಾರಣಾಂತಿಕವಾಗಬಹುದು. ಯಾವುದೇ ಜ್ವರವಿರಲಿ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಮನೆಯೊಳಗೆ ಹಾಗೂ ಮನೆಯ ಸುತ್ತ ಮುತ್ತ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಕೀಟಜನ್ಯ ರೋಗಗಳಿಂದ ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರತಿವರ್ಷ ಲಕ್ಷಾಂತರ ಜನರು ಸೊಳ್ಳೆಗಳಿಂದ ಹರಡುವ ಖಾಯಿಲೆಗಳಾದ ಮಲೇರಿಯ, ಡೆಂಗ್ಯೂ, ಚಿಕೂನ್‌ಗುನ್ಯ, ಮೆದುಳು ಜ್ವರ ಹಾಘೂ ಆನೆಕಾಲು ರೊಗಕ್ಕೆ ತುತ್ತಾಗುತ್ತಿದ್ದಾರೆ. ಶಿವಮೊಗ್ಗ ಜಲ್ಲೆಯಲ್ಲಿ ಈ ವರ್ಷ ಜನವರಿಯಿಂದ ಈವರೆಗೆ 7 ಮಲೇರಿಯ, 121 ಡೆಂಗ್ಯೂ, ಪ್ರಕರಣಗಳು ವರದಿಯಾಗಿವೆ. ಜೂನ್ ತಿಂಗಳಲ್ಲಿ 51 ಪ್ರಕರಣಗಳು ವರದಿಯಾಗಿರುವುದು ಗಮನಿಸಬೇಕಾದ ಅಂಶವಾಗಿದೆ ಎಂದರು.
ಸೊಳ್ಳೆಗಳು ಮನೆಯ ಒಳಗೆ ಹಾಗೂ ಹೊರಗೆ ಸಂಗ್ರಹವಾಗುವ ನೀರಿನಲ್ಲಿ ಉತ್ಪತ್ತಿಯಾಗುತ್ತವೆ. ಮನೆಯೊಳಗೆ ರೆಪ್ರಿಜಿರೇಟರ್ ಕೆಳಗಿನ ಟ್ರೇ, ಹೂಕುಂಡಗಳ ಕೆಳಗಿನ ಪ್ಲೇಟ್, ಸಿಮೆಂಟ್ ತೊಟ್ಟಿಗಳು, ಡ್ರಮ್‌ಗಳು ಹಾಗೂ ಮನೆಯ ಹೊರಗಡೆ ಬಿಸಾಕಿದ ತೆಂಗಿನ ಚಿಪ್ಪುಗಳು, ಒಡೆದ ಪ್ಲಾಸ್ಟಿಕ್ ವಸ್ತುಗಳು, ಅನುಪಯುಕ್ತ ಟೈರ್‌ಗಳು, ಶೌಚಗೃಹದ ಬಳಿ ಹಾಗೂ ದನಕರುಗಳು ಕುಡಿಯಲು ನಿರ್ಮಿಸಿರುವ ಸಿಮೆಂಟ್ ತೊಟ್ಟಿಗಳಲ್ಲಿ, ಚರಂಡಿಯಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಹೊಂದುವುದರಿAದ ಸೊಳ್ಳೆಗಳ ಸಂತಾನೋತ್ಪತ್ತಿಗಳ ತಾಣಗಳ ನಿರ್ಮೂಲನೆಯಿಂದ ಮಾತ್ರ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಸಾಧ್ಯ ಎಂದು ಹೇಳಿದರು.

ಪ್ರತಿಯೊಬ್ಬ ಸಾರ್ವಜನಿಕರು ಮನೆಯೊಳಗಿನ ನೀರು ಸಂಗ್ರಹ ಮಾಡುವ ಸಿಮೆಂಟ್ ತೊಟ್ಟಿ ಹಾಗೂ ಡ್ರಮ್‌ಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಉಜ್ಜಿ ತೊಳೆದು, ಒಣಗಿಸಿ ಪುನಃ ನೀರನ್ನು ತುಂಬಬೇಕು ಹಾಗೂ ಸೊಳ್ಳೆಗಳು ಕೂರದಂತೆ ಮುಚ್ಚಿಡಬೇಕು. ನೀರಿನ ಸಂಗ್ರಹ ಮೂಲಗಳನ್ನು ವಾರದಲ್ಲಿ ಒಮ್ಮೆ ತಪ್ಪದೇ ಸ್ವಚ್ಛಗೊಳಿಸಬೇಕು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸಬೇಕು
ಹಾಗೂ ಸಮರ್ಪಕವಾಗಿ ಘನತ್ಯಾಜ್ಯ ನಿರ್ವಹಣೆ ಮಾಡಬೇಕು. ಟೈರ್‌ಗಳಲ್ಲಿ ನೀರು ಸಂಗ್ರಹವಾಗದAತೆ ಮುಚ್ಚಿಡಬೇಕು ಎಂದು ಮಾಹಿತಿ ನೀಡಿದರು.
ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಪ್ರತಿ ತಿಂಗಳು ಮನೆ ಭೇಟಿ ನೀಡಿ ರೋಗವಾಹಕ ಆಶ್ರಿತ ರೋಗಗಳ ಕುರಿತು ಮಾಹಿತಿ ನೀಡುವುದರ ಜೊತೆಗೆ ಸೊಳ್ಳೆ ಉತ್ಪತ್ತಿ ತಾಣಗಳ ಸಮೀಕ್ಷೆ ನಡೆಸುತ್ತಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಡಾ.ನಾಗರಾಜ್ ನಾಯ್ಕ್ ಮಾತನಾಡಿ, ಸೊಳ್ಳೆಗಳಿಂದ ಹರಡುವ ಖಾಯಿಲೆಗಳಿಂದ ಮುಕ್ತಿ ಪಡೆಯಲು ಪ್ರತಿಯೊಬ್ಬರೂ ವೈಯಕ್ತಿಕ ಸುರಕ್ಷತೆಗಾಗಿ ಸೊಳ್ಳೆ ಪರದೆ
ಉಪಯೋಗಿಸಿವುದನ್ನು ರೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ಪ್ರಯೋಗಶಾಲೆ ಹಿರಿಯ ತಜ್ಞೆ ಇಂದಿರಾ ಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಛೇರಿಯ ಉಮೇಶ್, ಶಶಿಕುಮಾರ್ ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…