ಶಿವಮೊಗ್ಗ: ಭೂತಾನ್ ದೇಶದಿಂದ ಭಾರತಕ್ಕೆ 17 ಸಾವಿರ ಟನ್ ಅಡಿಕೆ ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅಡಿಕೆ ಬೆಳೆಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ವೇದಾ ವಿಜಯ್‌ಕುಮಾರ್ ಅವರ ನೇತೃತ್ವದಲ್ಲಿ ಶಿವಮೊಗ್ಗ ತಾಲ್ಲೂಕು ಹೊಳೆ ಬೆನವಳ್ಳಿ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅಡಿಕೆ ಬೆಳೆಗಾರರು ಸಹಿ ಸಂಗ್ರಹಿಸಿ ಪಿಡಿಒ ಮೂಲಕ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಈ ನಡೆಯಿಂದಾಗಿ ಅಡಿಕೆ ಬೆಳೆಗಾರರ ಬದುಕು ನೆಲಕಚ್ಚುವಂತಾಗಿದೆ. ಈಗಾಗಲೇ ಕೊಳೆ ರೋಗ, ಎಲೆ ಚುಕ್ಕಿ ರೋಗದಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಇಂತಹ ಸಮಯದಲ್ಲೇ ಕೇಂದ್ರ ಸರ್ಕಾರ ಬೇರೆ ದೇಶದಿಂದ ಅಡಿಕೆ ಆಮದು ಮಾಡಿಕೊಳ್ಳುವ ಮೂಲಕ ರೈತರ ಗಾಯದ ಮೇಲೆ ಬರೆ ಎಳೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿವಮೊಗ್ಗ ತಾಲ್ಲೂಕು ಸೇರಿದಂತೆ ಜಿಲ್ಲೆಯಾದ್ಯಂತ ರೈತರು ಅತಿ ಹೆಚ್ಚು ಅಡಿಕೆ ಬೆಳೆಯುತ್ತಾರೆ. ಆದರೆ, ಬಿಜೆಪಿ ಸರ್ಕಾರ ರೈತರ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಭೂತಾನ್‌ನಿಂದ 17000 ಟನ್ ಹಸಿ ಅಡಿಕೆ ತೆರಿಗೆ ಇಲ್ಲದೆ ಅಮದು ಮಾಡಿಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ರೈತರು ಅತಿ ಹೆಚ್ಚು ನೀರು, ಗೊಬ್ಬರ ಪೋಷಕಾಂಶ ನಿರ್ವಹಣಾ ವೆಚ್ಚವನ್ನು ಮಾಡಿ ದೀರ್ಘಾವಧಿಯಲ್ಲಿ 6 ರಿಂದ 8 ವರ್ಷಗಳ ಕಾಲ ಕಾದು ಬೆಳೆಯನ್ನು ಪಡೆಯಬೇಕಾದ ಸ್ಥಿತಿಯಲ್ಲಿ ಅಡಿಕೆ ಬೆಳೆಗಾರರು ಇದ್ದಾರೆ. ಆಮದು ಮಾಡಿಕೊಳ್ಳುವ ಅಡಿಕೆಯಿಂದ ಇಲ್ಲಿನ ರೈತರಿಗೆ ಬೆಲೆ ಕುಸಿಯುತ್ತದೆ ಎಂಬ ಆತಂಕ ಶುರುವಾಗಿದೆ. ಒಮ್ಮೊಮ್ಮೆ ಅತಿಯಾದ ಮಳೆಯಿಂದ ಕೊಳೆ ರೋಗಕ್ಕೆ ತುತ್ತಾಗಿ ಖರ್ಚು ಮಾಡಿದ ಹಣ ಸಹ ಬರದಂತ ಸ್ಥಿತಿಯಲ್ಲಿ ಅಡಿಕೆ ಬೆಳೆಗಾರರಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಸ್ತುತ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಸ್ಥಿರವಾಗಿದ್ದು ಇಂತಹ ಸಂದರ್ಭದಲ್ಲಿ ರೈತರು ಅನಿವಾರ್ಯವಾಗಿ ಅಡಿಕೆ ಬೆಳೆಯನ್ನು ವಿಸ್ತರಣೆ ಮಾಡುತ್ತಿದ್ದಾರೆ. ಆದರೆ ಸರ್ಕಾರ ಏಕಾಏಕಿ ಹಸಿ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ರೈತರು ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ ಎಂದು ವೇದಾ ವಿಜಯಕುಮಾರ್ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹಾಪ್ ಕಾಮ್ಸ್ ನಿರ್ದೇಶಕರು ಹಾಗೂ ಪಿ ಎಲ್ ಡಿ ಬ್ಯಾಂಕ್ ಉಪಾಧ್ಯಕ್ಷರಾದ ಆರ್.ವಿಜಯಕುಮಾರ್(ದನಿ) ಸಂತೇಕಡೂರುರವರು,ಗ್ರಾಮಪಂಚಾಯಿತಿಯ ಅಧ್ಯಕ್ಷರು,ಉಪಾಧ್ಯಕ್ಷರು,ಸದಸ್ಯರು,ಮುಖಂಡರು,ಕಾರ್ಯಕರ್ತರು,ರೈತರು,ಅಡಿಕೆ ಬೆಳೆಗಾರರ ಮತ್ತಿತರರು ಉಪಸ್ಥಿತರಿದ್ದರು.