ದೀಪ ಹಚ್ಚುತ್ತೇನೆ
ಬೆಳಕಿನ ದೀಪ ಹಚ್ಚುತ್ತೇನೆ…
ಕತ್ತಲು ಓಡಿಸುತ್ತೇನೆ ಎಂಬ ಅಂಹನಿಂದಲ್ಲ
ನನ್ನ ಮುಖ ಎಲ್ಲರು ನೋಡಲೆಂದು
ಸುತ್ತಲಿನ ಜಗತ್ತು ನನಗೆ ಕಾಣಲೆಂದು
ಜ್ಞಾನದ ದೀಪ ಹಚ್ಚುತ್ತೇನೆ….
ಅಜ್ಞಾನ ಓಡಿಸುತ್ತೇನೆ ಎಂಬ ನಂಬಿಕೆಯಿಂದಲ್ಲ
ಕಲಿತ ಅಕ್ಷರಗಳು ಮರೆಯಬಾರದೆಂದು
ಒಳಗಿರುವ ಜ್ಞಾನ ನಶಿಸಬಾರದೆಂದು
ದಾಸೋಹದ ದೀಪ ಹಚ್ಚುತ್ತೇನೆ….
ಹಸಿವು ನೀಗಿಸುತ್ತೆನೆ ಎಂಬ ಉತ್ಸಾಹದಿಂದಲ್ಲ
ಸಂಪಾದನೆಯಲ್ಲಿ ಒಂದಿಷ್ಟು ಪುಣ್ಯಯಿರಲೆಂದು
ಉಂಡವರು ಹರಸುತ್ತಾರೆಂದು
ಸ್ವಾಂತನದ ದೀಪ ಹಚ್ಚುತ್ತೇನೆ….
ಕಣ್ಣೀರು ಒರೆಸುತ್ತೇನೆ ಎಂಬ ವಿಶ್ವಾಸದಿಂದಲ್ಲ
ನೊಂದವರ ಮಾತುಗಳಿಗೆ ಕಿವಿಯಾಗಲೆಂದು
ಒಡಲಾಳದ ನೋವು ಖಾಲಿಯಾಗಲೆಂದು
ದೀಪಾವಳಿಯ ಹಣತೆ ಹಚ್ಚುತ್ತೇನೆ….
ಹೊಸತುಗಳಿಗೆ ಮುನ್ನಡಿಯಾಗುತ್ತದೆ ಎಂಬ ಭ್ರಮೆಯಿಂದಲ್ಲ
ಮನೆ-ಮನಗಳಲ್ಲಿ ಚೇತನ ತುಂಬಲೆಂದು
ದೈನಂದಿನ ಬದುಕಿನಲ್ಲಿ ನವೀನತೆ ಮೂಡಲೆಂದು