ಶಿವಮೊಗ್ಗ :ನೇರ, ನಿಷ್ಠುರ ಪತ್ರಕರ್ತರು ಶ್ರಮಿಸಿದಲ್ಲಿ ಸಾಮಾಜಿಕ ಜನಜೀವನದಲ್ಲಿ ಬದಲಾವಣೆ ಸಾಧ್ಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಪತ್ರಿಕಾ ಸಂಪಾದಕರ ಸಂಘ ಹಾಗೂ ದಿ ಎಡಿಟರ್ಸ ಕ್ಲಬ್ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು, ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಮೇಲಿನ ನಂಬಿಕೆ ಜೊತೆಗೆ ಪತ್ರಿಕಾಂಗದ ಕಾರ್ಯದ ಮೇಲೆ ಜನರು ಹೆಚ್ಚಿನ ನಂಬಿಕೆ ಇಟ್ಟಿದ್ದಾರೆ. ಪತ್ರಕತರು ಹಪಾಹಪಿತನದ ಸುದ್ದಿಗಳಿಗೆ ಬಲಿಯಾಗದೇ ವೃತ್ತಿಧರ್ಮದಿಂದ ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಪತ್ರಕರ್ತರು ಸಮಾಜದ ಅಭಿವೃದ್ಧಿಗೆ ಧ್ವನಿಯಾಗಿ ಕೆಲಸ ಮಾಡಬೇಕು. ಕರ್ತವ್ಯ ನಿರ್ವಹಣೆಯಲ್ಲಿ ಎಡರು ತೊಡರುಗಳನ್ನು ಮಾಡಿದಾಗ ಎಚ್ಚರಿಸುವ ಕೆಲಸವನ್ನು ಮಾಡಬೇಕು. ಇಂದಿನ ದಿನಮಾನಗಳಲ್ಲಿ ಪತ್ರಕರ್ತರ ಬದುಕು ಅನಿಶ್ಚಿತ ಅಗಿದೆ. ಬದುಕಿಗೆ ಯಾವುದೇ ಆಸರೆ ಇಲ್ಲದಂತಾಗಿದೆ. ಸಮಾಜದ ಕೈಗನ್ನಡಿಯಂತೆ ಹಗಲಿರುಳು ಶ್ರಮಿಸುತ್ತಿರುವ ಪತ್ರಕರ್ತರ ಬದುಕು ಸಂಕಷ್ಟದಲ್ಲಿದೆ ಎಂದರು.
ಕೇವಲ ಟಿಆರ್‌ಪಿಗಾಗಿ, ಬೇರೆಯವರ ಚಾರಿತ್ರ್ಯಹರಣ ಮಾಡಿಕೊಂಡು ಸುದ್ದಿ ಮಾಡುವುದರಿಂದ ವ್ಯಕ್ತಿಗತವಾಗಿ ತೊಂದರೆಯಾದರು ಇದರಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ. ಇಂತಹ ಸುದ್ದಿಗಳಿಗೆ ಮಹತ್ವ ಕೊಡದೇ ಸಮಾಜದ ಕಣ್ಣು ತೆರೆಸುವಂತಹ ಸುದ್ದಿಗಳನ್ನು ಕೊಡುವಂತಹ ಪತ್ರಿಕೋದ್ಯಮ ನಮಗೆ ಬೇಕು. ಪತ್ರಿಕೆಗಳ ಬಗ್ಗೆ ನನಗೆ ಬಹಳ ಅಪಾರದ ಗೌರವ ಮತ್ತು ವಿಶ್ವಾಸವಿದೆ. ನನ್ನಂತಹ ಹಲವಾರು ಜನಪ್ರತಿನಿಧಿಗಳನ್ನು ಈ ಮಟ್ಟಕ್ಕೆ ಬೆಳೆಸಿದ ಕೀರ್ತಿ ಪತ್ರಿಕೆಗಳಿಗೆ ಸಲ್ಲುತ್ತದೆ. ಒಂದು ಸಣ್ಣಮಟ್ಟದ ಪ್ರತಿಭಟನೆಯನ್ನು ದೊಡ್ಡಮಟ್ಟದಲ್ಲಿ ಸುದ್ದಿ ಮಾಡಿ, ಸರ್ಕಾರದ ಕಣ್ಣು ತೆರೆಸುವ ತಾಕತ್ತು ಪತ್ರಿಕೆಗಳಿಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ತು ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಪತ್ರಕರ್ತರು ಓಡಾಡುವ ವಿಶ್ವಕೋಶದ ತರ ಕೌಶಲ್ಯ ಹೊಂದಿರಬೇಕು. ಹಿಂದೆಲ್ಲ ಪತ್ರಕರ್ತರು ಗೂಗಲ್ ಥರ ಇದ್ದರು. ಎಲ್ಲಿ, ಯಾವ ಮಾಹಿತಿ ಕೇಳಿದರೂ ಮಾಹಿತಿ ನೀಡುವಷ್ಟುಪಾಂಡಿತ್ಯ ಹೊಂದಿದ್ದರು. ಇವತ್ತು ಪತ್ರಿಕಾರಂಗ ಉದ್ಯಮವಾಗಿದೆ. ಇದು ಸಮಾಜದ ದೃಷ್ಠಿಯಿಂದ ಒಳ್ಳೆಯದ್ದಲ್ಲ ಎಂದರು.
ವಿಧಾನ ಪರಿಷತ್ತು ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಇವತ್ತು ಪ್ರತಿಯೊಬ್ಬರಿಗೂ ವ್ಯಕ್ತಿ ನಿರ್ಮಾಣದ ಅಗತ್ಯವಿದೆ. ನೈತಿಕತೆಯಿಂದ ಸಮಾಜವನ್ನು ತಿದ್ದುವಂತಹ ಕೆಲಸಗಳು ಮುಂದುವರಿಯಬೇಕಿದೆ ಎಂದರು.
ವಿಧಾನ ಪರಿಷತ್ತು ಸದಸ್ಯ ಎಸ್.ರುದ್ರೇಗೌಡ ಮಾತನಾಡಿ, ಬೇರೆ ಜಿಲ್ಲೆಗಳಿಗೆ ಮಾದರಿ ಆಗುವ ರೀತಿಯಲ್ಲಿ ಕರ್ನಾಟಕ ಪತ್ರಿಕಾ ಸಂಪಾದಕರ ಸಂಘ ಹಾಗೂ ದಿ ಎಡಿಟರ್‍ಸ್ ಕ್ಲಬ್ ಬೆಳೆಯಲಿ ಎಂದು ಆಶಿಸಿದರು.
ಕರ್ನಾಟಕ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷ ಪದ್ಮನಾಭ ಮಾತನಾಡಿ, ಪತ್ರಿಕೋದ್ಯಮ ಸಂಕಷ್ಟದ ಸ್ಥಿತಿಯಲ್ಲಿದೆ. ಒಬ್ಬ ಸಂಪಾದಕ ಇಂತಹ ಪರಿಸ್ಥಿತಿಯಲ್ಲಿ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುವವರಿಗೆ ಸಂಭಾವನೆ ಕೊಟ್ಟು ಪತ್ರಿಕೆ ಹೊರತರುವ ಕಷ್ಟದ ದಿನಗಳಲ್ಲಿ ಈ ಸಂಘ ಮತ್ತು ಕ್ಲಬ್ ವತಿಯಿಂದ ಏನಾದರೂ ಒಂದು ಸಹಕಾರ ಮಾಡಬೇಕು ಎನ್ನುವ ಅಲೋಚನೆಯಲ್ಲಿ ಈ ಕ್ಲಬ್ ರಚನೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ನಾಲ್ಕು ಮಹಿಳಾ ಸಂಪಾದಕರಾದ ಲತಾ ರಂಗಸ್ವಾಮಿ, ಶಾಂತಿ ಕಣ್ಣಪ್ಪ, ಭಾಗ್ಯ ಅನಿಲ್, ಸುಶಿಲಾ ಸುಬ್ರಹ್ಮಣ್ಯ ಅವರಿಗೆ ಗೌರವ ಸಮರ್ಪಿಸಲಾಯಿತು. ಹಿರಿಯ ಡಿಟಿಪಿ ಆಪರೇಟರ್‌ಗಳಾದ ಎಸ್.ವಿ. ಗೀತಾ, ಪಿ.ಎಚ್. ರಾಜೇಶ್ವರಿ, ಪತ್ರಿಕಾ ವಿತರಕರಾದ ಎನ್.ಮಾಲತೇಶ್, ಮಾರುತಿ ಸನ್ಮಾನಿಸಿ ಗೌರವಿಸಲಾಯಿತು.
ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಎಸ್.ಸುಂದರೇಶ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಗೋಪಾಲ್ ಯಡಗೆರೆ, ದಿ ಎಡಿಟರ್‍ಸ್ ಕ್ಲಬ್ ಅಧ್ಯಕ್ಷರಾದ ಎಚ್.ಎನ್. ಮಂಜುನಾಥ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯರಾದ ಭಂಡಿಗಡಿ ನಂಜುಂಡಪ್ಪ. ಪ್ರಮುಖರಾದ ಗಾ.ರಾ.ಶ್ರೀನಿವಾಸ್, ಎ.ಭರತೇಶ್, ಕಣ್ಣಪ್ಪ, ಜಿ.ಚಂದ್ರಶೇಖರ್, ಎಸ್.ಕೆ.ಗಜೇಂದ್ರಸ್ವಾಮಿ, ನಾಗೇಶ್ ನಾಯ್ಕ್, ಶಿ.ಜು.ಪಾಶ, ರಘುರಾಜ್, ಹೆಚ್.ಕೆ.ರಂಜಿತ್, ಹಾಲೇಶ್, ಆನಂದ, ಅಣ್ಣಪ್ಪ ಮತ್ತಿತರರು ಇದ್ದರು.