ಶಿವಮೊಗ್ಗ: ಕಲಬುರಗಿ ಜಿಲ್ಲೆಯ ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದವರನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ ಶಿವಮೊಗ್ಗ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಅತ್ಯಾಚಾರಕ್ಕೊಳಗಾಗಿ ಕೊಲೆಯಾದ 14 ವರ್ಷದ ಅಪ್ರಾಪ್ತ ಬಾಲಕಿ ಮೂಲತಃ ಅಫಜಲಪುರ ತಾಲ್ಲೂಕಿನವಳಾಗಿದ್ದು, ಆಳಂದ ತಾಲ್ಲೂಕಿನ ಗ್ರಾಮವೊಂದರಲ್ಲಿ ವಿದ್ಯಾಭ್ಯಾಸ ಮಾಡಲು ಬಂದಿದ್ದಳು. ಈ ವೇಳೆ ಬಹಿರ್ದೆಸೆಗೆ ಹೋಗಿದ್ದಾಗ ಕಾಮುಕರು ಅಟ್ಟಹಾಸ ಮೆರೆದಿರುವುದು ಅತ್ಯಂತ ನೋವಿನ ಸಂಗತಿ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.

ಅಪ್ರಾಪ್ತ ಬಾಲಕಿ ಮೇಲೆ ನಡೆದ ಈ ಘಟನೆಯಿಂದಾಗಿ ಇಡಿ ಗ್ರಾಮ ಮಾತ್ರವೇ ಅಲ್ಲದೇ ರಾಜ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ರಾಜ್ಯದಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿರುವುದು ನೋಡಿದರೇ ನಮ್ಮ ದೇಶದ ಕಾನೂನು ಮತ್ತು ಪೊಲೀಸ್ ವ್ಯವಸ್ಥೆಯ ಮೇಲೆ ಜನರು ನಂಬಿಕೆ ಕಳೆದುಕೊಳ್ಳುವಂತಾಗಿದೆ ಎಂದು ತಿಳಿಸಿದರು.

ಗಲ್ಲು ಶಿಕ್ಷೆ ವಿಧಿಸಿ…
ಪಾಶ್ಚಾತ್ಯ ಹಾಗೂ ಅರಬ್ ದೇಶಗಳಲ್ಲಿ ಇಂತಹ ಸಮಾಜಘಾತುಕ ಕ್ರೌರ್ಯ ಎಸಗುವವರಿಗೆ ಅತ್ಯಂತ ಕಠಿಣ ಶಿಕ್ಷೆ ನೀಡುವ ಕಾನೂನು ಜಾರಿಯಲ್ಲಿದ್ದು, ಇಂತಹ ಕಾನೂನುಗಳನ್ನು ನಮ್ಮ ದೇಶದಲ್ಲೂ ಜಾರಿಗೆ ತರಬೇಕು. ಆಗ ಮಾತ್ರವೇ ಇಂತಹ ಕ್ರೌರ್ಯಗಳನ್ನು ನಿಲ್ಲಿಸಲು ಸಾಧ್ಯ ಎಂದು ತಿಳಿಸಿದರು.

ಇನ್ನೂ ಕಲಬುರಗಿ ಜಿಲ್ಲೆಯಲ್ಲಿ ಮಂಗಳವಾರ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಹತ್ಯೆಗೈದ ದುಷ್ಕರ್ಮಿಗಳು ಯಾರೇ ಆಗಿದ್ದರೂ ಅಂತಹವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ದೇಶದಲ್ಲಿ ಜಾರಿಗೆ ತರಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.

ಅಲ್ಲದೇ, ಅತ್ಯಾಚಾರಕ್ಕೊಳಗಾಗಿ, ಹತ್ಯೆಯಾದ ಬಾಲಕಿಯನ್ನಂತೂ ಮರಳಿ ತಂದು ಕೊಡಲು ಸಾಧ್ಯವಿಲ್ಲ. ಹಾಗಾಗಿ ನೊಂದ ಪಾಲಕರಿಗೆ ಸೂಕ್ತ ಪರಿಹಾರವನ್ನು ನೀಡಬೇಕು. ನೊಂದ ಕುಟುಂಬಕ್ಕೆ ಸೂಕ್ತ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಶಿವಮೊಗ್ಗ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿನಯ್ ತಾಂದ್ಲೆ, ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ,NSUI ರಾಜ್ಯ ಕಾರ್ಯದರ್ಶಿ ಬಾಲಾಜಿ, ಯುವ ಮುಖಂಡರುಗಳಾದ ಶರತ್ ಮರಿಯಪ್ಪ, ವಿನೋದ,ಶ್ರೀಧರ, ಅಪ್ಪು ,ಮಂಜುನಾಥ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಅರುಣಾ, ಪುರಲೆ ಮಂಜು,ಪ್ರದೀಪ್ ,ಶಿವಕುಮಾರ್ ,ಸಂದೀಪ್, ಭರತ್, ದರ್ಶನ, ರಾಘವೇಂದ್ರ,ಗಿರೀಶ್ ,ಸಂತೋಷ್, ಅನಿಲ್ ಆಚಾರ್ ,ವಾರ್ಡ್ ಅಧ್ಯಕ್ಷ ನವೀನ್, ಒಬಿಸಿ ಬ್ಲಾಕ್ ಅಧ್ಯಕ್ಷರಾದ ಮೋಹನ್ ,ಸಂದೇಶ ಕೃಷ್ಣ ರಾಮಚಂದ್ರ ಹಾಗೂ ಇನ್ನೂ ಹಲವಾರು ಯುವಕರಿದ್ದರು.

ವರದಿ ಪ್ರಜಾಶಕ್ತಿ…