ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಸಂಸ್ಥೆಯ ವತಿಯಿಂದ ಜಿಲ್ಲಾಡಳಿತ ಭವನ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಂಸ್ಥಾಪನಾ ದಿನಾಚರಣೆ ಮತ್ತು ಧ್ವಜ ಚೀಟಿ ಬಿಡುಗಡೆಯನ್ನು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ನೆರವೇರಿಸಿದರು.

ಈ ವೇಳೆ ಅವರು ಮಾತನಾಡಿ, ಸುಮಾರು 115 ವರ್ಷಗಳ ಹಿಂದೆ ಬೇಡನ್ ಪಾವೆಲ್ ಅವರು ಹುಟ್ಟು ಹಾಕಿದ ಸ್ಕೌಡ್ ಮತ್ತು ಗೈಡ್ಸ್‍ನಲ್ಲಿ ಕೋಟಿ ಸಂಖ್ಯೆಯಲ್ಲಿ ಮಕ್ಕಳು ಇದ್ದಾರೆ. ಸ್ಕೌಟ್ಸ್ ಮತ್ತು ಗೈಡ್ಸ್ ಒಂದು ಶಿಸ್ತುಬದ್ದ, ಸೇವಾನಿರತ ಸಂಸ್ಥೆಯಾಗಿದ್ದು, ಸಾಮಾನ್ಯವಾಗಿ ಎಲ್ಲ ರೀತಿಯ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ಪಲ್ಸ್ ಪೊಲೀಯೋ, ಸ್ವಚ್ಚ ಭಾರತ್ ಅಭಿಯಾನ, ಲಸಿಕಾಕರಣ ಹೀಗೆ ಸರ್ಕಾರದ, ಸಮಾಜದ ಹತ್ತು ಹಲವಾರು ಕಾರ್ಯಕ್ರಮಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ತಮ್ಮ ಸೇವೆಯನ್ನು ನೀಡುತ್ತಿದೆ. ಜೀವನ ಕೌಶಲ್ಯವನ್ನು ಈ ಸಂಸ್ಥೆ ನೀಡುತ್ತಿರುವುದು ಹೆಮ್ಮೆಯ ವಿಚಾರ. ರಾಜ್ಯ ಮತ್ತು ಪ್ರಾದೇಶಿಕ ಮಟ್ಟದ ಕಾರ್ಯಾಗಾರಗಳು ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಮಕ್ಕಳು ಪಾಲ್ಗೊಳ್ಳುವದನ್ನು ನೋಡುವುದೇ ಸಂತೋಷ ಎಂದರು.

ಕಾರ್ಯಕ್ರಮ ನಿರೂಪಿಸಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಭಾರತಿರಾಮ್ ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ನಡೆದು ಬಂದ ದಾರಿ, ಇದರ ಉದ್ದೇಶ, ಗುರಿಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಸ್ಕೌಟ್ ಮತ್ತು ಗೈಡ್ಸ್‍ನ ಜಿಲ್ಲಾ ಮುಖ್ಯ ಆಯುಕ್ತರಾದ ಹೆಚ್.ಡಿ.ರಮೇಶ್ ಶಾಸ್ತ್ರಿ, ಗೈಡ್ಸ್‍ನ ಜಿಲ್ಲಾ ಆಯುಕ್ತ ಕೆ.ಪಿ.ಬಿಂದುಕುಮಾರ್, ಸ್ಕೌಟ್ಸ್‍ನ ಜಿಲ್ಲಾ ಆಯುಕ್ತ ಶಕುಂತಲಾ ಚಂದ್ರಶೇಖರ್, ಜಿಲ್ಲಾ ಕಾರ್ಯದರ್ಶಿ ಹೆಚ್.ಪರಮೇಶ್ವರ್, ಸಹ ಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ವಿಜಯ್ ಕುಮಾರ್,ಭಾರತಿರಾಮ್ ಎಸ್, ಸ್ಕೌಟ್ ಮತ್ತು ಗೈಡ್ಸ್‍ಗಳು ಹಾಜರಿದ್ದರು.

ವರದಿ ಪ್ರಜಾಶಕ್ತಿ…